ನವ ದೆಹಲಿ: ದೆಹಲಿ ಮತ್ತು ಮುಂಬಯಿಯಲ್ಲಿರುವ ಬಿಬಿಸಿ ಬ್ರಿಟಿಷ್ ಮಾಧ್ಯಮ ಸಂಸ್ಥೆಯ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ರೇಡ್ (IT Raid On BBC) ಮಾಡಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಮೊಬೈಲ್, ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಿದ್ದಾರೆ. ಹಾಗೇ, ಅವರಿಗೆ ಕೆಲಸ ಮುಂದುವರಿಸಲು ಅವಕಾಶ ಕೊಡದೆ, ಮನೆಗೆ ಹೋಗುವಂತೆ ಸೂಚಿಸಿದ್ದಾರೆ. ಬಿಬಿಸಿ ವಿರುದ್ಧ, ಅಂತಾರಾಷ್ಟ್ರೀಯ ತೆರಿಗೆ ನಿಯಮಗಳ ಉಲ್ಲಂಘನೆ ಮತ್ತು ಹಣ ವರ್ಗಾವಣೆ ಅಕ್ರಮದ ಆರೋಪ ಕೇಳಿಬಂದಿದ್ದರಿಂದ ಐಟಿ ಅಧಿಕಾರಿಗಳು ಸರ್ವೇ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಬಿಬಿಸಿ ಮಾಧ್ಯಮ ಸಂಸ್ಥೆ ಪ್ರಧಾನಿ ಮೋದಿಯವರ ಬಗ್ಗೆ ‘ಇಂಡಿಯಾ; ದಿ ಮೋದಿ ಕ್ವಶ್ಚನ್’ ಎಂಬ ಒಂದು ಡಾಕ್ಯುಮೆಂಟರಿ ನಿರ್ಮಿಸಿ ಪ್ರಸಾರ ಮಾಡಿತ್ತು. 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಮೋದಿ ಪಾತ್ರ ಇದೆ ಎಂಬಂತೆ ಈ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಿದ್ದು, ವಿವಾದ ಸೃಷ್ಟಿಯಾಗಿತ್ತು. ಡಾಕ್ಯುಮೆಂಟರಿಯ ಲಿಂಕ್ಗಳನ್ನೆಲ್ಲ ಸಾಮಾಜಿಕ ಜಾಲತಾಣಗಳಿಂದ ಕೇಂದ್ರ ಸರ್ಕಾರ ತೆಗೆಸಿತ್ತು. ಈಗ ಅದರ ಬೆನ್ನಲ್ಲೇ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿಯಾಗಿದೆ.
ಪ್ರತಿಪಕ್ಷಗಳಿಂದ ಟೀಕೆ
ಬಿಬಿಸಿ ಮಾಧ್ಯಮ ಸಂಸ್ಥೆ ಮೇಲೆ ನಡೆದ ಐಟಿ ರೇಡ್ನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ‘ನಾವಿಲ್ಲಿ ಅದಾನಿ ಷೇರು ಕುಸಿತ, ಆರ್ಥಿಕ ಹಗರಣದ ಬಗ್ಗೆ ಜಂಟಿ ಸಮಿತಿ ತನಿಖೆಗೆ ಆಗ್ರಹಿಸುತ್ತಿದ್ದರೆ, ಸರ್ಕಾರ ಬಿಬಿಸಿ ಹಿಂದೆ ಬಿದ್ದಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಹಾಗೇ, ಇನ್ನೊಬ್ಬ ಮುಖಂಡ ಗೌರವ್ ಗೊಗೊಯಿ ಟ್ವೀಟ್ ಮಾಡಿ, ‘ಭಾರತ ಈ ಸಲ ಜಿ20 ಅಧ್ಯಕ್ಷತೆ ವಹಿಸುತ್ತಿದೆ. ಅದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ನಿರ್ಲಜ್ಜವಾಗಿ ತಮ್ಮ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ. ಅದಾನಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಬಿಬಿಸಿ ಮೇಲೆ ರೇಡ್ ಮಾಡಿಸಿದ್ದಾರೆ. ಶ್ರೀಮಂತರಿಗೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟಿದ್ದಾರೆ. ಆದರೆ ಇನ್ನೊಂದೆಡೆ ನಿರುದ್ಯೋಗ, ಅಸಮಾನತೆಗಳು ತಾಂಡವವಾಡುತ್ತಿದೆ’ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿ ‘ಇದು ಅನಿರೀಕ್ಷಿತವಾ?’ ಎಂದು ವ್ಯಂಗ್ಯ ಮಾಡಿದ್ದಾರೆ.