ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹೊಸ್ತಿಲಿನಲ್ಲಿಯೇ ಕಾಂಗ್ರೆಸ್‌ಗೆ (Congress) ಸಾಲು ಸಾಲು ಪೆಟ್ಟುಗಳು ಬೀಳುತ್ತಿವೆ. ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ, ಇಂಡಿಯಾ ಒಕ್ಕೂಟದಲ್ಲಿ (India Bloc) ಬಿರುಕಿನ ಮಧ್ಯೆಯೇ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆಯು (Income Tax Department) ಹೊಸ ಶಾಕ್ ನೀಡಿದೆ. ಕೆಲ ವರ್ಷಗಳಿಂದ ತೆರಿಗೆ ರಿಟರ್ನ್ಸ್‌ನಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ 1,700 ಕೋಟಿ ರೂಪಾಯಿಯ ಟ್ಯಾಕ್ಸ್ ನೋಟಿಸ್ (Tax Notice) ಜಾರಿಗೊಳಿಸಿದೆ.
ಐಟಿ ಇಲಾಖೆ ನೋಟಿಸ್ ನೀಡಿರುವುದನ್ನು ಕಾಂಗ್ರೆಸ್ ನಾಯಕ ವಿವೇಕ್ ತಂಖಾ ದೃಢಪಡಿಸಿದ್ದಾರೆ. 2017-18ನೇ ಸಾಲಿನಿಂದ 2020-21ನೇ ಹಣಕಾಸು ಸಾಲಿನಲ್ಲಿ ಕಾಂಗ್ರೆಸ್ ತೆರಿಗೆ ರಿಟರ್ನ್ಸ್ ವೇಳೆ ವ್ಯತ್ಯಾಸವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯು ಕಾಂಗ್ರೆಸ್‌ಗೆ 1,700 ಕೋಟಿ ರೂ. ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಿದೆ. ಇದರಲ್ಲಿ ದಂಡ ಹಾಗೂ ಬಡ್ಡಿಯೂ ಸೇರಿದೆ ಎಂದು ವಿವೇಕ್ ತಂಖಾ ತಿಳಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
Income Tax Department has issued demand notice of Rs 1700 crores to Indian National Congress. The fresh demand notice is for assessment years 2017-18 to 2020-21 and includes penalty and interest: Sources
— ANI (@ANI) March 29, 2024
ಆದಾಯ ತೆರಿಗೆ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ನ ಹಲವು ಖಾತೆಗಳಿಗೆ ತಡೆಹಿಡಿದಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಹಲವು ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65 ಕೋಟಿ ರೂಪಾಯಿ ವಿತ್‌ಡ್ರಾ ಮಾಡಿದೆ. ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಐಟಿ ಇಲಾಖೆಯು ಹಣ ವಿತ್‌ಡ್ರಾ ಮಾಡಿದೆ. ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ರೂ. ಪಡೆಯಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಇದನ್ನೂ ಓದಿ: Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್!
ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ರೈಲ್ವೆ ಟಿಕೆಟ್ ಬುಕ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕಾಂಗ್ರೆಸ್ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಆದಾಯ ತೆರಿಗೆ ಇಲಾಖೆಯ ಮರು ಮೌಲ್ಯಮಾಪನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಇದರ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಕಾಂಗ್ರೆಸ್ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ