ಲಖನೌ: ಜ್ಞಾನವಾಪಿ ಮಸೀದಿಯ ವಿಡಿಯೊಗ್ರಾಫಿಕ್ ಸರ್ವೆಗಾಗಿ ನೇಮಿಸಿರುವ ಕೋರ್ಟ್ ಕಮಿಷನರ್ ಬದಲಾವಣೆ ಆಗ್ರಹಿಸಿ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಕೋರ್ಟ್ ತೀರ್ಪು ನೀಡುವ ನಡುವೆಯೇ ಬಿಜೆಪಿಯ ಮಾಜಿ ಶಾಸಕ ಸಂಗೀತ್ ಸೋಮು ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
1992ರಲ್ಲಿ ಅಯೋಧ್ಯೆಯಲ್ಲಿ ನಡೆದಿರುವುದೇ 2022ರಲ್ಲಿ ವಾರಾಣಸಿಯಲ್ಲಿ ನಡೆಯಲಿದೆ ಎಂದು ಅವರು ಮಹಾರಾಣ ಪ್ರತಾಪ್ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸೋಮು ಅವರು ಇಂಥ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾದವರು.
ಅವರ ವಾದವೇನು?
ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾ ಶೃಂಗಾರ ಗೌರಿ ಸ್ಥಳದಲ್ಲಿ ವಿಡಿಯೊಗ್ರಫಿ ಸರ್ವೆ ನಡೆದರೆ ಅಲ್ಲಿರುವ ಸ್ವಸ್ತಿಕ್ ಮತ್ತು ಹಿಂದೂ ದೇವರ ಪ್ರತಿಮೆಗಳು ಬೆಳಕಿಗೆ ಬರಲಿವೆ. ಒಂದು ವೇಳೆ ಮಸೀದಿಯ ಒಳಗಡೆ ಹಿಂದೂ ದೇವರುಗಳ ಮೂರ್ತಿ ಇದೆ, ಸ್ವಸ್ತಿಕವಿದೆ ಎಂದು ತಿಳಿದುಹೋದರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. 1992ರಲ್ಲಿ ಅಯೋಧ್ಯೆಯಲ್ಲಿ ನಡೆದಿದ್ದು 2022ರಲ್ಲಿ ವಾರಾಣಸಿಯಲ್ಲೂ ನಡೆಯಲಿದೆ ಎಂದು ಸೋಮು ಹೇಳಿದ್ದಾರೆ. ಆದರೆ, ಅವರು ಎಲ್ಲೂ ಬಾಬರಿ ಮಸೀದಿಯ ಹೆಸರು ಹೇಳಿಲ್ಲ.
ಫೇಸ್ ಬುಕ್‌ನಲ್ಲೂ ಬರೆದಿದ್ದಾರೆ..
ತನ್ನ ಅಭಿಪ್ರಾಯಗಳನ್ನು ಫೇಸ್ ಬುಕ್‌ನಲ್ಲೂ ಹಂಚಿಕೊಂಡಿರುವ ಸಂಗೀತ್ ಸೋಮು, ಔರಂಗಜೇಬ ಜ್ಞಾನವಾಪಿ ಮಸೀದಿ ನಿರ್ಮಿಸಿದ ಎಂದು ಹೇಳುತ್ತಾರೆ. ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಿಸಿದ್ದು ಬಾಬರಿಯಂತೆ. ಇದೀಗ 2022. ಮಸೀದಿ ನಿರ್ಮಾಣಕ್ಕಾಗಿ ಬಳಸಿದ ಮಸೀದಿಯನ್ನು ಮರಳಿ ವಶಪಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.
ತೀರ್ಪು ಬರುವ ಹೊತ್ತಲ್ಲೇ..
ಜ್ಞಾನವಾಪಿ ಮಸೀದಿಯ ಪಕ್ಕದಲ್ಲೇ ಇರುವ ಶೃಂಗಾರ್ ಗೌರಿ ದೇವಸ್ಥಾನದಲ್ಲಿ ವಿಡಿಯೊಗ್ರಫಿ ನಡೆಸಲು ನೇಮಿಸಿರುವ ಕೋರ್ಟ್ ಕಮಿಷನರ್ ಬದಲಾವಣೆಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಬುಧವಾರ ನಡೆದಿತ್ತು.
ವಾರಾಣಸಿ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಮಸೀದಿಯ ಒಳಗೆ ವಿಡಿಯೊಗ್ರಫಿ ಮಾಡಲು ಸೂಚಿಸಿಲ್ಲ. ಮಸೀದಿಯ ಹೊರಾವರಣವಾದ ಚಬೂತರ್‌ನಲ್ಲಷ್ಟೇ ವಿಡಿಯೊಗ್ರಫಿ ಮಾಡಲು ಸೂಚಿಸಿದ್ದಾರೆ ಎಂದು ಮಸೀದಿ ಪರ ನ್ಯಾಯವಾದಿಗಳು ವಾದಿಸಿದರು. ಸರ್ವೆಗಾಗಿ ನೇಮಿಸಿದ ಕೋರ್ಟ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರ ಬಗ್ಗೆ ಮಸೀದಿ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ತೀರ್ಪು ನಿರೀಕ್ಷೆ
ಬುಧವಾರ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾದಿರಿಸಿದ್ದು, ಗುರುವಾರ ಪ್ರಕಟಿಸುವ ಸಾಧ್ಯತೆ ಇದೆ.