ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯುಕ್ತರ (Election Commissioners) ನೇಮಕಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಹಾಗಾಗಿ, ಲೋಕಸಭೆ ಚುನಾವಣೆ (Lok Sabha Election) ಹೊತ್ತಿನಲ್ಲೇ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ. “ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕೆ ಈಗ ತಡೆಯಾಜ್ಞೆ ನೀಡಿದರೆ ಗೊಂದಲ ಸೃಷ್ಟಿಯಾಗುತ್ತದೆ” ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು.
ಕೆಲ ದಿನಗಳ ಹಿಂದಷ್ಟೇ ಸುಖಬೀರ್ ಸಿಂಗ್ ಸಂಧು ಹಾಗೂ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದು, ನೇಮಕಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತಾ ನೇತೃತ್ವದ ನ್ಯಾಯಪೀಠವು, “ಚುನಾವಣಾ ಆಯೋಗವು ಶಾಸಕಾಂಗದ ಹೆಬ್ಬೆರಳಿನ ಕೆಳಗಿದೆ ಎಂದು ಹೇಳಲು ಆಗುವುದಿಲ್ಲ. ಈಗ ನೇಮಕಕ್ಕೆ ತಡೆಯಾಜ್ಞೆ ನೀಡಿದರೆ ಗೊಂದಲ ಸೃಷ್ಟಿಯಾಗುತ್ತದೆ” ಎಂದು ಸ್ಪಷ್ಟಪಡಿಸಿತು.
Supreme Court of India DISMISSES Applications seeking stay on the appointment of Election Commissioners under the new CEC & EC Act 2023
— Ashwani Dubey (@ashwani_dube) March 21, 2024
#SupremeCourtofIndia #SupremeCourt
“ಇಬ್ಬರು ಚುನಾವಣಾ ಆಯುಕ್ತರನ್ನು ಹೊಸ ಕಾನೂನಿನ ಅನ್ವಯ ರಚಿಸಲಾದ ಸಮಿತಿಯು ನೇಮಕ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ನಿಯಮವನ್ನು ತಪ್ಪು ಎಂದು ಹೇಳಲು ಆಗದು. ಅಷ್ಟಕ್ಕೂ, ನೇಮಕಗೊಂಡಿರುವ ಇಬ್ಬರು ಆಯುಕ್ತರ ವಿರುದ್ಧ ಯಾವುದೇ ಆರೋಪಗಳಿಲ್ಲ. ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ನೇಮಕಕ್ಕೆ ತಡೆಯಾಜ್ಞೆ ನೀಡಲು ಆಗುವುದಿಲ್ಲ” ಎಂದು ಹೇಳಿತು.
ಇದನ್ನೂ ಓದಿ: Lok Sabha Election : ಚುನಾವಣಾ ಆಯೋಗದಿಂದ ಸಸ್ಪೆಂಡ್ ಆಗಿದ್ದ ವಿವೇಕ್ ಸಹಾಯ್ ಪ. ಬಂಗಾಳದ ಡಿಜಿಪಿ!
ಮಾರ್ಚ್ 14ರಂದು ಕೇಂದ್ರ ಸರ್ಕಾರವು ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಿದೆ. ಪಂಜಾಬ್‌ನ ಬಿ. ಸುಖಬೀರ್ ಸಂಧು ಹಾಗೂ ಕೇರಳದ ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿರುವ ಆಯ್ಕೆ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಗಿದೆ.
ಆಯುಕ್ತರಾಗಿದ್ದ ಅರುಣ್ ಗೋಯೆಲ್ ಅವರ ಕೆಲ ದಿನಗಳ ಹಿಂದಷ್ಟೇ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳು ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ