ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ (Rajiv Gandhi Assassination) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಳಿನಿ ಶ್ರೀಹರನ್ (Nalini Sriharan) ಸೇರಿ ಆರು ಜನರನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ (ನವೆಂಬರ್ 12) ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ನಳಿನಿ ಶ್ರೀಹರನ್ ಜತೆಗೆ ಆಕೆಯ ಪತಿ ಮುರುಗನ್, ಸಂತನ್, ರಾಬರ್ಟ್, ಪಯಾಸ್ ಹಾಗೂ ಜಯಕುಮಾರ್ ಎಂಬುವರನ್ನು ತಮಿಳುನಾಡಿನ ಜೈಲುಗಳಿಂದ ಬಂಧಮುಕ್ತಗೊಳಿಸಲಾಗಿದೆ.
ಮಾಜಿ ಪ್ರಧಾನಿಯ ಹತ್ಯೆ ಪ್ರಕರಣದಲ್ಲಿ 31 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಯಾಗಿ ಬಂದ ನಳಿನಿ ಶ್ರೀಹರನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಜೈಲಿನಿಂದ ಹೊರಬಂದಿರುವುದು ನನಗೆ ಹೊಸ ಜೀವನ ಸಿಕ್ಕಂತಾಗಿದೆ” ಎಂದಿದ್ದಾರೆ. “ನಾನು ಸಾರ್ವಜನಿಕ ಜೀವನದಲ್ಲಿ ಇರುವುದಿಲ್ಲ. 30ಕ್ಕೂ ಅಧಿಕ ವರ್ಷಗಳಿಂದ ನನ್ನನ್ನು ಬೆಂಬಲಿಸಿದ ತಮಿಳಿಗರಿಗೆ ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ಧನ್ಯವಾದ ತಿಳಿಸುತ್ತೇನೆ. ಇದು ನನಗೆ ಹೊಸ ಜೀವನ” ಎಂದು ಹೇಳಿದ್ದಾರೆ.
ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ 1991ರ ಮೇ 21ರಂದು ಎಲ್‌ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬರ್ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಳಿನಿ ಶ್ರೀಹರನ್ ಸೇರಿ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ನವೆಂಬರ್ 11) ಆದೇಶಿಸಿತ್ತು. ಇವರ ಬಿಡುಗಡೆಗೆ ರಾಜ್ಯ ಸರ್ಕಾರವು ಶಿಫಾರಸು ಮಾಡಿತ್ತು.
ಇದನ್ನೂ ಓದಿ | Rajiv Gandhi Assassination | ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್