ನವದೆಹಲಿ: ನೂತನ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Excise Policy Case) ಸಿಬಿಐನಿಂದ ೧೪ ತಾಸು ವಿಚಾರಣೆ ಎದುರಿಸಿದ ಬೆನ್ನಲ್ಲೇ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ, ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಆಪ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ತೀವ್ರ ಸ್ಪರ್ಧೆಯ ಭಯದಿಂದ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಬಕಾರಿ ನೀತಿ ಜಾರಿ ವೇಳೆ ಆಗಿದೆ ಎನ್ನಲಾದ ಅಕ್ರಮದ ಬಗ್ಗೆ ಚಿಂತೆಗೀಡಾಗಿಲ್ಲ, ಮುಂದಿನ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಬಲ ಸ್ಪರ್ಧೆಯೊಡ್ಡುತ್ತಾರೆ. ಕೇಜ್ರಿವಾಲ್ ಅವರ ಕುರಿತ ಆತಂಕದಿಂದಾಗಿ ತನಿಖಾ ಸಂಸ್ಥೆಗಳನ್ನು ನಮ್ಮ ವಿರುದ್ಧ ಬಳಸಲಾಗುತ್ತಿದೆ. ಆದರೆ, ಇದಾವುದಕ್ಕೂ ನಾವು ಹೆದರುವುದಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ದೆಹಲಿ ಸರಕಾರದ ಅಭಿವೃದ್ಧಿ ಯೋಜನೆಗಳಿಂದ ಕೇಂದ್ರ ಸರಕಾರವು ವಿಚಲಿತಗೊಂಡಿದೆ. ನಮ್ಮ ಯೋಜನೆಗಳ ಕುರಿತು ವಿದೇಶದ ಪತ್ರಿಕೆಗಳು ಸಕಾರಾತ್ಮಕವಾಗಿ ವರದಿ ಮಾಡುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿಯೇ ನಮ್ಮನ್ನು ತನಿಖಾ ಸಂಸ್ಥೆಗಳ ಮೂಲಕ ತಡೆಯಲು ಯತ್ನಿಸಲಾಗುತ್ತಿದೆ. ಆದರೆ, ಇದಾವುದಕ್ಕೂ ನಾವು ಜಗ್ಗುವುದಿಲ್ಲ. ಜನರ ಪರ ಯೋಜನೆಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸುವುದಿಲ್ಲ. ತನಿಖಾ ಸಂಸ್ಥೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ | ಅಬಕಾರಿ ನೀತಿ ಪ್ರಕರಣ | ಸಿಸೋಡಿಯಾ ಮನೆಯಲ್ಲಿ 14 ಗಂಟೆ ತನಿಖೆ ನಡೆಸಿದ ಸಿಬಿಐ