ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಕಾಲುಕೆರೆದುಕೊಂಡು ಜಗಳಕ್ಕೆ ಬಂದ ಚೀನಾ ಸೈನಿಕರಿಗೆ ಭಾರತದ ಯೋಧರು ಸರಿಯಾಗಿ ತಿರುಗೇಟು (India China Clash) ನೀಡಿದ್ದಾರೆ. ಇದರಿಂದಾಗಿಯೇ, ಗಡಿಯಲ್ಲಿ ಪರಿಸ್ಥಿತಿ ಸಮಸ್ಥಿತಿಯಿಂದ ಕೂಡಿದೆ ಎಂದು ಚೀನಾ ಹೇಳಿದೆ. ಇದರ ಬೆನ್ನಲ್ಲೇ, “ಭಾರತದ ತಂಟೆಗೆ ಬಂದರೆ ತಟ್ಟದೆ ಬಿಡುವುದಿಲ್ಲ” ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ತಿರುಗೇಟು ನೀಡಿದ್ದಾರೆ.
“ಇದು 1962ರಲ್ಲಿ ನಡೆದ ಯುದ್ಧದ ಸಂದರ್ಭ ಅಲ್ಲ. ಗಡಿಯಲ್ಲಿ ನಡೆಯುವ ಯಾವುದೇ ಆಕ್ರಮಣಕಾರಿ ಚಟುವಟಿಕೆಯನ್ನು ನಮ್ಮ ಯೋಧರು ಹಿಮ್ಮೆಟ್ಟಿಸುತ್ತಾರೆ. ನಮ್ಮ ತಂಟೆಗೆ ಬರುವವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಹಾಗಾಗಿ, ನೆರೆ ರಾಷ್ಟ್ರಗಳ ಯಾವುದೇ ಉಪಟಳ ನಡೆಯುವುದಿಲ್ಲ” ಎಂದು ಹೇಳಿದ್ದಾರೆ.
“1962ರ ಪರಿಸ್ಥಿತಿಯೇ ಬೇರೆ ಇತ್ತು. ಗಡಿಯಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿ ಇರಲಿಲ್ಲ. ಅದರ ಹೊರತಾಗಿಯೂ ದೇಶದ ಯೋಧರು ತಾಯ್ನಾಡಿಗಾಗಿ ಪ್ರಾಣ ತೆತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಗಡಿ ಭಾಗಗಳಲ್ಲಿ ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ದೇಶದ ಸೇನೆಯು ಮತ್ತಷ್ಟು ಬಲಿಷ್ಠವಾಗಿದೆ” ಎಂದು ತಿಳಿಸಿದ್ದಾರೆ.
ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9ರಂದು ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ. ಇದರಲ್ಲಿ ಭಾರತದ ಆರು ಯೋಧರು ಗಾಯಗೊಂಡಿದ್ದರೆ, ಕಮ್ಯುನಿಸ್ಟ್ ರಾಷ್ಟ್ರದ ಹೆಚ್ಚಿನ ಯೋಧರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Amit Shah On Nehru | ಚೀನಾ ಮೇಲೆ ನೆಹರು ಪ್ರೀತಿಯಿಂದ ಭಾರತದ ಕೈತಪ್ಪಿದ ವಿಶ್ವಸಂಸ್ಥೆ ಕಾಯಂ ಸದಸ್ಯತ್ವ, ಶಾ ವಾಗ್ದಾಳಿ