ನವದೆಹಲಿ: 2024ರಲ್ಲಿಯೇ ನಡೆಯಲಿರುವ ಲೋಕಸಭೆ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಹೋದರ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ (YS Jagan Mohan Reddy) ಅವರಿಗೆ ಸೆಡ್ಡು ಹೊಡೆಯಲು ಅವರ ಸಹೋದರಿ ವೈ.ಎಸ್.ಶರ್ಮಿಳಾ ಅವರು ಸಜ್ಜಾಗಿದ್ದಾರೆ. ಹೌದು, ವೈ.ಎಸ್.ಶರ್ಮಿಳಾ (YS Sharmila) ಅವರು ಗುರುವಾರ (ಜನವರಿ 4) ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದು, ಇದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಜಗನ್‌ಮೋಹನ್ ರೆಡ್ಡಿ ಅವರಿಗೆ ಭಾರಿ ಪೈಪೋಟಿ ನೀಡಲು ಕಾಂಗ್ರೆಸ್ ಹಾಗೂ ಶರ್ಮಿಳಾ ಸಜ್ಜಾದಂತಾಗಿದೆ.
ದೆಹಲಿಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಗೆ ತೆರಳಿದ ವೈ.ಎಸ್.ಶರ್ಮಿಳಾ, ಪಕ್ಷ ಸೇರ್ಪಡೆಯಾದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶರ್ಮಿಳಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ವೈಎಸ್‌ಆರ್ ತೆಲಂಗಾಣ ಪಾರ್ಟಿಯ ಮುಖ್ಯಸ್ಥೆಯೂ ಆಗಿರುವ ವೈ.ಎಸ್.ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದ್ದಾರೆ.
आंध्रप्रदेश में कॉंग्रेस पार्टी के लिए बहुत अच्छी खबर।
— Ritu Choudhary (@RituChoudhryINC) January 4, 2024
राहुल गाँधी जी और कॉंग्रेस अध्यक्ष @kharge जी की उपस्थिति में YS Sharmila कॉंग्रेस में शामिल हुई। pic.twitter.com/zgkfkV24OU
ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯ ಜತೆಗೆ ಈ ವರ್ಷ ರಾಜ್ಯ ಚುನಾವಣೆಗೂ ಮುನ್ನ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನಾಯಕತ್ವವು ಶರ್ಮಿಳಾ ಅವರಿಗೆ ಪ್ರಮುಖ ಪಾತ್ರವನ್ನು ನೀಡಲಿದೆ. ಆಕೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮಟ್ಟದ ಹುದ್ದೆ ದೊರೆಯಬಹುದು ಎಂದು ತಿಳಿದುಬಂದಿದೆ. ಈ ಕ್ರಮವು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸುವ ಗುರಿಯನ್ನು ಹೊಂದಿದೆ. ಪ್ರಮುಖ ವಿರೋಧ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಪ್ರಭಾವವನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದೆ.
ಶರ್ಮಿಳಾ 2012ರಲ್ಲಿ ಸುದ್ದಿಯಾಗಿದ್ದರು. ಆಂಧ್ರಪ್ರದೇಶದಿಂದ ತೆಲಂಗಾಣ ಬೇರ್ಪಡಿಸುವ ಹೋರಾಟದ ಹಿನ್ನಲೆಯಲ್ಲಿ ಆಕೆಯ ಸಹೋದರ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ವೈಎಸ್‌ಆರ್‌ಟಿಪಿ ಸ್ಥಾಪಿಸಿದರು. ಅವರೊಂದಿಗೆ 18 ಶಾಸಕರು ಸೇರಿಕೊಂಡರು. ಇದು ಹಲವು ಉಪಚುನಾವಣೆಗಳಿಗೆ ನಾಂದಿ ಹಾಡಿತು. ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿ ರೆಡ್ಡಿ ಜೈಲಿನಲ್ಲಿರುವಾಗ ಅವರ ತಾಯಿ ವೈಎಸ್ ವಿಜಯಮ್ಮ ಮತ್ತು ಸಹೋದರಿ ವೈಎಸ್ ಶರ್ಮಿಳಾ ಪ್ರಚಾರದ ನೇತೃತ್ವ ವಹಿಸಿದ್ದರು. 2014ರ ಚುನಾವಣೆಯಲ್ಲಿ ವೈಎಸ್‌ಸಿಆರ್‌ಪಿ ಸೋತರೂ, 2019ರಲ್ಲಿ ಗೆದ್ದಿತ್ತು.
ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರತಿಪಕ್ಷ ಟಿಡಿಪಿ ಕಾರ್ಯಕರ್ತೆ!
2021ರಲ್ಲಿ ಶರ್ಮಿಳಾ ಅವರು ತಮ್ಮ ಸಹೋದರನೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದರು. ತೆಲಂಗಾಣದಲ್ಲಿ ವೈಎಸ್ಆರ್‌ಸಿಪಿಗೆ ಅಸ್ತಿತ್ವವಿಲ್ಲ ಎಂದರು. ಅದೇ ವರ್ಷ ಜುಲೈನಲ್ಲಿ ಅವರು ವೈಎಸ್ಆರ್ ತೆಲಂಗಾಣ ಪಕ್ಷವನ್ನು ಘೋಷಿಸಿ, ಕೆ. ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಪ್ರಚಾರ ಪ್ರಾರಂಭಿಸಿದರು. ಕಳೆದ ಸಲದ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದರು.
ಕಾಂಗ್ರೆಸ್ ಮೂಲಗಳ ಪ್ರಕಾರ, ಆಂಧ್ರದಲ್ಲಿ ಪಕ್ಷದ ಮತಗಳಿಕೆ ಕಳೆದ 10 ವರ್ಷಗಳಲ್ಲಿ ಹೀನಾಯವಾಗಿ ಕುಸಿದಿದೆ. ಕೇವಲ ಶೇ.1 ಪ್ರತಿಶತದಷ್ಟು ಮತಬ್ಯಾಂಕ್ ಇದೆ. ಶರ್ಮಿಳಾ ಸೇರ್ಪಡೆಯಿಂದ ಪಕ್ಷಕ್ಕೆ ನೆರವಾಗಬಹುದು ಎಂದು ಭಾವಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ