Site icon Vistara News

Vice President of India | ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಧನಕರ್ ಜಯಭೇರಿ​​, ನಿರೀಕ್ಷೆಗಿಂತ ಹೆಚ್ಚಿನ ಮತ

jagdeep dhankhar

ನವ ದೆಹಲಿ: ಭಾರತದ ನೂತನ ಉಪರಾಷ್ಟ್ರಪತಿಯಾಗಿ (Vice President of India) ಎನ್​ಡಿಎ ಒಕ್ಕೂಟದ ಅಭ್ಯರ್ಥಿ ಜಗದೀಪ್​ ಧನಕರ್​ ಆಯ್ಕೆಯಾಗಿದ್ದಾರೆ. ಜಗದೀಪ್​ ಧನಕರ್​ ವಿರುದ್ಧ ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಕಾಂಗ್ರೆಸ್​​ನ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾರನ್ನು ಕಣಕ್ಕೆ ಇಳಿಸಿದ್ದವು. ಜಗದೀಪ್​ ಧನಕರ್​ಗೆ 528 ಮತಗಳು ಬಿದ್ದಿದ್ದರೆ, ಮಾರ್ಗರೆಟ್ ಆಳ್ವಾ 128 ವೋಟ್​ ಪಡೆದಿದ್ದಾರೆ. 15 ಮತಗಳು ಅಮಾನ್ಯಗೊಂಡಿವೆ. ಜಗದೀಪ್​ ಧನಕರ್​ ಅವರು ಉಪರಾಷ್ಟ್ರಪತಿ ಆಗುವ ಜತೆ ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಜಗದೀಪ್​ ಧನಕರ್​ ಗೆಲುವಿನ ಸಂಭ್ರಮಾಚರಣೆ ಬಿಜೆಪಿ ಪಾಳಯದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಅವರ ಹುಟ್ಟೂರಾದ ರಾಜಸ್ಥಾನದ ಜುಂಜುನುವಿನಲ್ಲಿ ಕೂಡ ಸ್ಥಳೀಯರು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಇನ್ನು ಕೆಲವೇ ಹೊತ್ತಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಅವರು ಜಗದೀಪ್​ ಧನಕರ್​ರನ್ನು ಭೇಟಿಯಾಗಲಿದ್ದಾರೆ. ಗೆಲುವು ಸಾಧಿಸಿದ ಜಗದೀಪ್​ ಧನಕರ್​​ರಿಗೆ ರಾಜಕೀಯ ಗಣ್ಯರೆಲ್ಲ ಶುಭ ಹಾರೈಸುತ್ತಿದ್ದಾರೆ.

ಯಾರು ಜಗದೀಪ್​ ಧನಕರ್​?
ಜಗದೀಪ್‌ ಧನಕರ್‌ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಆದರೆ ಇವರಿಗೂ-ರಾಜ್ಯ ಸರ್ಕಾರಕ್ಕೂ ಸದಾ ಜಟಾಪಟಿ ಆಗುತ್ತಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತ ಕ್ರಮದ ಕಟು ವಿಮರ್ಶಕರು ಇವರಾಗಿದ್ದರು. ಹಾಗಾಗಿ ತೃಣಮೂಲ ಕಾಂಗ್ರೆಸ್‌ ಕೂಡ ಜಗದೀಪ್‌ ಧನಕರ್‌ ಅವರನ್ನು ಬಿಜೆಪಿ ಏಜೆಂಟ್‌ ಎಂದೇ ಕರೆಯುತ್ತಿತ್ತು. ವೃತ್ತಿಯಲ್ಲಿ ವಕೀಲರಾಗಿರುವ ಜಗದೀಪ್‌ ಧನಕರ್‌ ರಾಜಕೀಯ ಪ್ರವೇಶ ಮಾಡಿದ್ದು 1989ರಲ್ಲಿ. ಇವರು ಜನತಾ ಪರಿವಾರದವರು. ಮಾಜಿ ಪ್ರಧಾನಿ ಚಂದ್ರಶೇಖರ್‌ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ೭೧ ವರ್ಷದ ಜಗದೀಪ್‌ ಧನಕರ್‌, ರಾಜಸ್ಥಾನದ ಜುನ್‌ಜುನು ಲೋಕಸಭಾ ಕ್ಷೇತ್ರದಿಂದ ಆಗ ಆಯ್ಕೆಯಾಗಿದ್ದರು. ೧೯೯೩ರಿಂದ ೯೮ರ ವರೆಗೆ ಕಿಶಾನ್‌ಘರ್‌ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Vice Presidential Poll | ಉಪರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ; ಎಣಿಕೆ ಪ್ರಾರಂಭ

Exit mobile version