ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿಗೆ ಮಾಜಿ ಆರೋಗ್ಯ ಸಚಿವ ಜೈ ನಾರಾಯಣ ವ್ಯಾಸ್ ಅವರು ರಾಜೀನಾಮ ನೀಡಿದ್ದಾರೆ. ಇದೇ ವೇಳೆ, ನರ್ಮದಾ ಕಾಲುವೆಯ ಗರಿಷ್ಠ ಉಪಯೋಗ ಮಾಡಿಕೊಳ್ಳುತ್ತಿರುವ ರಾಜಸ್ಥಾನದ ಸರ್ಕಾರವನ್ನು ಹೊಗಳುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
2007ರಿಂದ 2012ರವರೆಗೆ ಬಿಜೆಪಿ ಸರ್ಕಾರದಲ್ಲಿ ಜೈ ನಾರಾಯಣ ವ್ಯಾಸ್ ಅವರು ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗ ಬಿಜೆಪಿಗೆ ರಾಜೀನಾಮೆ ನೀಡಿರುವ ಅವರು, ಯಾವ ಪಕ್ಷಕ್ಕೆ ಸೇರ್ಪಡೆಯಾಲಿದ್ದಾರೆ ಎಂಬ ಯಾವುದೇ ಮಾಹಿತಿ ಇಲ್ಲ. ಆದರೂ ಇತ್ತೀಚೆಗಷ್ಟೇ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದರು. ಕೆಲವು ಮೂಲಗಳ ಪ್ರಕಾರ ಅವರು ಆಪ್ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಮಾತಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಏತನ್ಮಧ್ಯೆ, ಕಾಂಗ್ರೆಸ್ ಗುಜರಾತ್ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಒಟ್ಟು 43 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಪ್ರಮುಖ ನಾಯಕ ಅರ್ಜನ್ ಮೋಧವಾಡಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಪೋರಬಂದರ್ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಆಗಿರುವ ಮೋಧವಾಡಿಯಾ ಅವರು ಸ್ಪರ್ಧಿಸಲಿದ್ದಾರೆ.
ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆಯಲ್ಲಿ ನಡೆಯಲಿದೆ. ಮೊದಲನೇ ಹಂತಕ್ಕೆ ಡಿಸೆಂಬರ್ 1 ಮತ್ತು ಎರಡನೇ ಹಂತಕ್ಕೆ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ | Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?