- ಜಾಗತಿಕ ಚಿಂತಕರ ಚಾವಡಿ ಗ್ಲೋಬ್‌ಸೆಕ್-2022ರಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬಲವಾಗಿ ಸಮರ್ಥಿಸಿದ ಜೈ ಶಂಕರ್
- ಯುರೋಪ್ ನ ಇಬ್ಬಂದಿತನವನ್ನು ಬಯಲಿಗೆಳೆದ ವಿದೇಶಾಂಗ ಸಚಿವರಿಗೆ ಭೇಷ್ ಎಂದ ನೆಟ್ಟಿಗರು
- ಉಕ್ರೇನ್ ವಿಚಾರದಲ್ಲಿ ಭಾರತ ತನ್ನದೇ ನಿಲುವು ಹೊಂದಿದೆ ಎಂದು ಪ್ರತಿಪಾದಿಸಿದ ಜೈ ಶಂಕರ್
ನವ ದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಜಾಗತಿಕ ಚಿಂತಕರ ಚಾವಡಿ ಗ್ಲೋಬ್‌ಸೆಕ್ 2022ರ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ನೀಡಿದ ಖಡಕ್ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತವನ್ನು ಸದಾ ಟೀಕಿಸುತ್ತಿರುವ ಯುರೋಪ್ ಅನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್, ಯುರೋಪ್ ತನಗೆ ಬೇಕಾದಂತೆ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರುತ್ತಿದೆ. ರಷ್ಯಾದ ತೈಲ ಮತ್ತು ಅನಿಲ ಅದಕ್ಕೆ ಬೇಕು, ಆದರೆ ಭಾರತ ಮಾತ್ರ ಖರೀದಿಸಬಾರದು ಎಂದರೆ ಹೇಗೆ ಎಂದು ಯುರೋಪಿಗೆ ತಿರುಗೇಟು ಕೊಟ್ಟರು.
ಭಾರತ ರಷ್ಯಾದಿಂದ ತೈಲ ಖರೀದಿಸಿ ಯುದ್ಧಕ್ಕೆ ಹಣ ನೀಡುತ್ತದೆ ಎಂದು ಯುರೋಪ್ ಟೀಕಿಸುತ್ತಿದೆ. ಆದರೆ ಯುರೋಪ್ ಕೂಡ ರಷ್ಯಾದಿಂದ ಅನಿಲ ಖರೀದಿಸುತ್ತಿದೆ. ಅದು ಯುದ್ಧಕ್ಕೆ ಬಳಕೆಯಾಗುತ್ತಿಲ್ಲವೇ ಎಂದು ಜೈ ಶಂಕರ್ ಯುರೋಪ್ ಬೂಟಾಟಿಕೆಯನ್ನು ವಿವರಿಸಿದರು.
ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವು ಸೇರಿದಂತೆ ವಿದೇಶಾಂಗ ನೀತಿ ಕುರಿತ ಹಲವಾರು ಪ್ರಶ್ನೆಗಳಿಗೆ ಜೈ ಶಂಕರ್ ಖಡಕ್ ಉತ್ತರ ನೀಡಿರುವುದು ಗಮನ ಸೆಳೆದಿದೆ. ಉಕ್ರೇನ್ ಸಮರದ ವಿಷಯದಲ್ಲಿ ಭಾರತದ ನಿಲುವನ್ನು ಬಲವಾಗಿ ಸಮರ್ಥಿಸಿದ ಜೈ ಶಂಕರ್, ಒಂದು ಹಂತದಲ್ಲಿ ” ಯುರೋಪ್ ತನ್ನ ಸಮಸ್ಯೆ ಜಗತ್ತಿನ ಸಮಸ್ಯೆ ಹಾಗೂ ಜಗತ್ತಿನ ಸಮಸ್ಯೆ ತನ್ನದಲ್ಲ ಎಂಬ ಭ್ರಮೆಯಿಂದ ಹೊರ ಬರಬೇಕುʼʼ ಎಂದು ಕುಟುಕಿದರು.
ಉಕ್ರೇನ್ ಸಮರ ವಿಚಾರದಲ್ಲಿ ಭಾರತ ಯಾವ ದೇಶದ ಜತೆಗೆ ನಿಲ್ಲಲಿದೆ? ಅಮೆರಿಕ ಅಥವಾ ಚೀನಾದ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದೆ? ಎಂಬ ಪ್ರಶ್ನೆಗೆ ಜೈಶಂಕರ್, ” ಭಾರತ ಅಮೆರಿಕದ ಜತೆಗೆ ಅಥವಾ ಚೀನಾದ ಜತೆಗೆ ನಿಲ್ಲಬೇಕು ಎಂದು ಕೇಳುವುದೇ ಸರಿಯಲ್ಲ, ಅದನ್ನು ನಾನು ಒಪ್ಪುವುದಿಲ್ಲ. ಭಾರತ ಜಗತ್ತಿನ ಐದನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ಪ್ರಪಂಚದ 5 ಅಥವಾ 6ನೇ ಅತಿ ದೊಡ್ಡ ಆರ್ಥಿಕತೆ. ನಾವು ಯಾರೊಬ್ಬರ ಬದಿಗೆ ಹೋಗಿ ನಿಲ್ಲಬೇಕಾದ ಅಗತ್ಯ ಇಲ್ಲ. ನಮಗೆ ನಮ್ಮದೇ ನಿಲುವು ಇದೆʼʼ ಎಂದು ಬಲವಾಗಿ ಸಮರ್ಥಿಸಿದರು.
ಅಂತಾರಾಷ್ಟ್ರೀಯ ಚಿಂತಕರ ಚಾವಡಿಯಲ್ಲಿ ಪಾಶ್ಚಿಮಾತ್ಯ ದೇಶಗಳ ಇಬ್ಬಂದಿತನವನ್ನು ತರಾಟೆಗೆ ತೆಗೆದುಕೊಂಡು, ಭಾರತದ ವಿದೇಶಾಂಗ ನೀತಿಯನ್ನು ಸ್ಪಷ್ಟವಾಗಿ ಮತ್ತು ಬಲವಾಗಿ ಸಮರ್ಥಿಸಿದ ಜೈ ಶಂಕರ್ ಅವರ ಖಡಕ್ ಶೈಲಿ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.
ಭಾರತದ ವಿದೇಶಾಂಗ ನೀತಿಯ ಇತಿಹಾಸದಲ್ಲಿ ಎರಡು ವಿಭಾಗಗಳು ಇವೆ. ಒಂದು ಡಾ. ಜೈಶಂಕರ್ ಅವರ ಮೊದಲು ಮತ್ತೊಂದು ಡಾ. ಜೈಶಂಕರ್ ನಂತರ ಎಂದು ಟ್ವಿಟಿಗರೊಬ್ಬರು ಶ್ಲಾಘಿಸಿದ್ದಾರೆ. ಭಾರತದ ಶ್ರೇಷ್ಠ ವಿದೇಶಾಂಗ ಸಚಿವರಾಗಿ ಜೈಶಂಕರ್ ಅವರನ್ನು ಇತಿಹಾಸ ಸ್ಮರಿಸಿಕೊಳ್ಳಲಿದೆ ಎಂದು ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ತನ್ನ ಇಂಧನ ಭದ್ರತೆಗೆ ರಷ್ಯಾದಿಂದ ತೈಲ ಕೊಳ್ಳುತ್ತಿದೆಯೇ ಹೊರತು ಅದರಲ್ಲಿ ಬೇರೆ ಯಾವ ದುರುದ್ದೇಶವೂ ಇಲ್ಲ. ಆದರೆ ಭಾರತವು ರಷ್ಯಾದಿಂದ ಒಂದು ತಿಂಗಳಿಗೆ ಖರೀದಿಸುವ ತೈಲವನ್ನು ಸ್ವತಃ ಯುರೋಪ್ ಒಂದು ಹೊತ್ತಿಗೆ ಖರೀದಿಸುತ್ತದೆ ಎಂದು ಈ ಹಿಂದೆಯೂ ಜೈಶಂಕರ್, ಮುಟ್ಟಿ ನೋಡಿಕೊಳ್ಳುವಂಥ ತೀಕ್ಷ್ಣ ತಿರುಗೇಟು ಕೊಟ್ಟಿದ್ದರು. ಇದಾದ ಬಳಿಕ ಅಮೆರಿಕ ಮತ್ತು ಯುರೋಪ್ ಗಪ್ ಚುಪ್ ಆಗಿತ್ತು. ಭಾರತವನ್ನು ವೃಥಾ ಟೀಕಿಸುವ ಗೋಜಿಗೆ ಪಾಶ್ಚಿಮಾತ್ಯ ಸರಕಾರಗಳ ವಕ್ತಾರರು ಬಳಿಕ ಕೈ ಹಾಕಿರಲಿಲ್ಲ.