ನವದೆಹಲಿ: ಜೈನರ ಪವಿತ್ರ ಯಾತ್ರಾಸ್ಥಳ ಶ್ರೀ ಸಮ್ಮೇದ್ ಶಿಖರ್ಜಿ (Shri Sammed Shikharji)ಯನ್ನು ಪ್ರವಾಸಿ ಸ್ಥಳ ಎಂಬುದಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ವಿರುದ್ಧ ಜೈನ ಸಮುದಾಯದ ಜನ ಕರ್ನಾಟಕ ಸೇರಿ ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ (Jain Community Protest) ನಡೆಸಿದ್ದಾರೆ.
ಕರ್ನಾಟಕದ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಸಾವಿರಾರು ಜೈನರು ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಜಾರ್ಖಂಡ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ, ಗುಜರಾತ್‌ನಲ್ಲಿರುವ ಪಾಲಿತನ ಯಾತ್ರಾ ಸ್ಥಳದ ಧ್ವಂಸದ ವಿರುದ್ಧವೂ ಖಂಡನೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಹಾಗೂ ಮಹಾರಾಷ್ಟ್ರದಲ್ಲಂತೂ ಪ್ರತಿಭಟನೆ ಗಂಭೀರ ಸ್ವರೂಪ ಪಡೆದಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಭವನದ ಮಾರ್ಗದಲ್ಲಿ ಸಾವಿರಾರು ಜೈನರು ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದು, ಪೊಲೀಸರು ಜನರನ್ನು ತಡೆದಿದ್ದಾರೆ. ಇದೇ ವೇಳೆ ಜೈನ ಸಮುದಾಯದವರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ಶ್ರೀ ಸಮ್ಮೇದ್ ಶಿಖರ್ಜಿ ಯಾತ್ರಾ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ಘೋಷಿಸಿರುವ ತೀರ್ಮಾನವನ್ನು ಹಿಂಪಡೆಯಬೇಕು. ಗುಜರಾತ್ ದೇವಾಲಯ ಧ್ವಂಸಕ್ಕೆ ಕಾರಣವಾದ ಗುಜರಾತ್ ಸರ್ಕಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಜೈನ ಧರ್ಮದ 24 ತೀರ್ಥಂಕರರಲ್ಲಿ 20 ಜನ ಶ್ರೀ ಸಮ್ಮೇದ್ ಶಿಖರ್ಜಿಯಲ್ಲಿಯೇ ಮೋಕ್ಷ ಪಡೆದರು ಎಂಬ ನಂಬಿಕೆಯ ಕಾರಣ ಜೈನರಿಗೆ ಇದು ಸೂಕ್ಷ್ಮ ವಿಷಯವಾಗಿದೆ.
ಇದನ್ನೂ ಓದಿ | Medical negligence | ಆಪರೇಷನ್ ಮಾಡಿದ ಕೆಲವೇ ಹೊತ್ತಲ್ಲಿ ಯುವತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ, ಪ್ರತಿಭಟನೆ