Site icon Vistara News

ಸಲ್ಲೇಖನ ವೃತ ಆಚರಿಸಿ ಜೈನ ಮುನಿ ಆಚಾರ್ಯ ವಿದ್ಯಾಸಾಗರ್‌ ಪ್ರಾಣತ್ಯಾಗ; ಮೋದಿ ಸಂತಾಪ

acharya shri vidyasagar maharaj

Jain Seer Acharya Vidhyasagar passes away, PM Narendra Modi pays condolences

ರಾಯ್‌ಪುರ: ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿ, ದೇಶಾದ್ಯಂತ ಖ್ಯಾತಿ ಗಳಿಸಿದ್ದ ಜೈನ ಮುನಿ (Jain Seer) ಆಚಾರ್ಯ ವಿದ್ಯಾಸಾಗರ ಮಹಾರಾಜ್‌ (Acharya Vidyasagar Maharaj) (77) ಅವರು ಸಲ್ಲೇಖನ ವ್ರತ ಆಚರಿಸಿ ಪ್ರಾಣತ್ಯಾಗ ಮಾಡಿದ್ದಾರೆ. ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿಯ ತೀರ್ಥದಲ್ಲಿ ಭಾನುವಾರ (ಫೆಬ್ರವರಿ 18) ಬೆಳಗ್ಗೆ 2.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಜೈನಮುನಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಜೈನ ಧರ್ಮದ ದಾರ್ಶನಿಕರಲ್ಲಿ ಒಬ್ಬರಾಗಿದ್ದ ಆಚಾರ್ಯ ವಿದ್ಯಾಸಾಗರ ಮಹಾರಾಜ್‌ ಅವರು ಕಳೆದ ಕೆಲ ದಿನಗಳಿಂದ ಅಸ್ವಸ್ತರಾಗಿದ್ದರು. ಅವರ ಆರೋಗ್ಯವು ಕ್ಷೀಣಿಸಿತ್ತು. ಹಾಗಾಗಿ ಅವರು ಫೆಬ್ರವರಿ 14ರಂದು ಬೆಳಗಿನ ಜಾವ 2.35ರ ಸುಮಾರಿಗೆ ಸಲ್ಲೇಖನ ವ್ರತ ಆರಂಭಿಸಿದ್ದರು. ಕಳೆದ ಮೂರು ದಿನಗಳಿಂದಲೂ ಅವರು ಅನ್ನ, ನೀರು ಸೇವಿಸಿರಲಿಲ್ಲ. ಕೊನೆಗೆ ಭಾನುವಾರ ಬೆಳಗ್ಗೆ ಅವರು ಪ್ರಾಣತ್ಯಾಗ ಮಾಡಿದರು ಎಂದು ತಿಳಿದುಬಂದಿದೆ. ಅವರು ಮೌನ ವ್ರತವನ್ನೂ ಆಚರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಸಂತಾಪ

ಆಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಆಚಾರ್ಯ ಶ್ರೀ 108 ವಿದ್ಯಾಸಾಗರ್‌ ಮಹಾರಾಜ್‌ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ಅಗಣಿತ ಅನುಯಾಯಿಗಳ ದುಃಖದಲ್ಲಿ ನಾನೂ ಪಾಲುದಾರನಾಗಿದ್ದೇನೆ. ಜನರಲ್ಲಿ ಅಧ್ಯಾತ್ಮದ ಜಾಗೃತಿ ಮೂಡಿಸುವುದು, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ದೇಶದ ಜನ ಎಂದಿಗೂ ಮರೆಯುವಂತಿಲ್ಲ. ಕೆಲ ವರ್ಷಗಳ ಹಿಂದೆ, ಚಂದ್ರಗಿರಿ ಜೈನ ಮಂದಿರಕ್ಕೆ ತೆರಳಿ, ಅವರ ಆಶೀರ್ವಾದ ಪಡೆಯುವ ಭಾಗ್ಯ ನನ್ನದಾಗಿತ್ತು” ಎಂದು ನರೇಂದ್ರ ಮೋದಿ ಅವರು ವಿದ್ಯಾಸಾಗರ್‌ ಮಹಾರಾಜ್‌ ಅವರ ಭೇಟಿಯನ್ನು ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯ

ಕರ್ನಾಟಕದಲ್ಲಿ ಜನನ

ಆಚಾರ್ಯ ವಿದ್ಯಾಸಾಗರ್‌ ಮಹಾರಾಜ್‌ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆ ಸದಲಗಾ ಗ್ರಾಮದಲ್ಲಿ 1946ರ ಅಕ್ಟೋಬರ್‌ 10ರಂದು ಜನಿಸಿದರು. ಬಾಲ್ಯದಿಂದಲೂ ಅಧ್ಯಾತ್ಮದಲ್ಲಿ ಒಲವಿದ್ದ ಅವರು ರಾಜಸ್ಥಾನದಲ್ಲಿ 26ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುವ ಮೂಲಕ ಸನ್ಯಾಸತ್ವ ಸ್ವೀಕರಿಸಿದರು. ಇವರು ಜನಿಸಿದ ಮನೆಯನ್ನು ಈಗ ದೇವಾಲಯವನ್ನಾಗಿ ನಿರ್ಮಿಸಲಾಗಿದೆ. ಇವರು ಜೀವನದುದ್ದಕ್ಕೂ ಹಾಲು, ತುಪ್ಪ, ಹಣ್ಣು, ಸಕ್ಕರೆಯನ್ನು ಸೇವಿಸದೆ, ಹಗಲಲ್ಲಿ ಒಂದು ಬಾರಿ ಮಾತ್ರ ಊಟ ಮಾಡುತ್ತಿದ್ದರು. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರವಚನ ನೀಡಿ ಇವರು ದೇಶದ ಗಮನ ಸೆಳೆದಿದ್ದರು. ಕನ್ನಡ, ಹಿಂದಿ, ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯಲ್ಲಿ ಇವರು ಪರಿಣತಿ ಸಾಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version