ನವ ದೆಹಲಿ: ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ (Cong Prez Poll)ದ ಚುನಾವಣೆಯಲ್ಲಿ ಸ್ಪರ್ಧಿಸಲು ಸೋನಿಯಾ ಗಾಂಧಿಯವರಿಂದ ಒಪ್ಪಿಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದಂತೆ ಕಾಂಗ್ರೆಸ್ನ ಸಂವಹನ ವಿಭಾಗದ ಮುಖ್ಯಸ್ಥ, ಹಿರಿಯ ನಾಯಕ ಜೈರಾಮ್ ರಮೇಶ್ ಪರೋಕ್ಷವಾಗಿಯೇ ಶಶಿ ತರೂರ್ಗೆ ತಿರುಗೇಟು ಕೊಟ್ಟಿದ್ದಾರೆ. ‘ಪಕ್ಷದ ನಾಯಕತ್ವದ ಸ್ಥಾನಕ್ಕೆ ಸ್ಫರ್ಧಿಸಲು ಬಯಸುವವರು ಯಾರ ಒಪ್ಪಿಗೆಯನ್ನೂ ಪಡೆಯುವ ಅಗತ್ಯವಿಲ್ಲ’ ಎಂದಿದ್ದಾರೆ.
ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ‘ಭಾರತ್ ಜೋಡೋ ಯಾತ್ರೆಯ ಯಶಸ್ಸಿಗಾಗಿ ಇಡೀ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ. ಇದೇ ಹೊತ್ತಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೂ ನಡೆಯಲಿದೆ. ಅದರಲ್ಲಿ ಪಕ್ಷದ ಯಾವುದೇ ಸದಸ್ಯ ಸ್ಪರ್ಧಿಸಬಹುದು ಎಂಬುದನ್ನು ಪುನರುಚ್ಚಿಸುತ್ತೇನೆ. ಇದೊಂದು ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಪ್ರಕ್ರಿಯೆ. ಇದರಲ್ಲಿ ಭಾಗವಹಿಸಲು ಯಾರಿಗೂ, ಯಾರ ಅಪ್ಪಣೆಯೂ ಬೇಡ’ ಎಂದಿದ್ದಾರೆ.
ಶಶಿ ತರೂರ್ ಜಿ23 ಗುಂಪಿನ ಪ್ರಮುಖ ನಾಯಕರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದ ಹೊರತಾಗಿರುವವರು ಆಯ್ಕೆಯಾಗಬೇಕು ಎಂದು ಒತ್ತಾಯಿಸಿದವರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಹಾಗೇ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮೊಟ್ಟಮೊದಲನೇ ಅಭ್ಯರ್ಥಿಯಾಗಿ ಇವರ ಹೆಸರೇ ಕೇಳಿಬಂದಿದೆ. ಇನ್ನೊಂದೆಡೆ ಅಶೋಕ್ ಗೆಹ್ಲೋಟ್ರನ್ನೂ ಅಭ್ಯರ್ಥಿಯನ್ನಾಗಿಸಲು ಹಲವರು ಪ್ರಯತ್ನ ಮಾಡುತ್ತಿದ್ದಾರೆ.
ಆದರೆ ಈಗ ಶಶಿ ತರೂರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ, ಜೈರಾಮ್ ರಮೇಶ್ ಮಾಡಿರುವ ಟ್ವೀಟ್ ಕೂಡ ಹಲವು ಪ್ರಶ್ನೆ ಹುಟ್ಟಿಸಿದೆ. ಇವರ್ಯಾಕೆ ಇಷ್ಟು ತೀಕ್ಷ್ಣವಾಗಿ ಟ್ವೀಟ್ ಮಾಡಿದರು? ಅಧ್ಯಕ್ಷ ಸ್ಥಾನಕ್ಕೆ ತರೂರ್ ಸ್ಪರ್ಧಿಸುವುದು ಜೈರಾಮ್ ರಮೇಶ್ಗೆ ಇಷ್ಟವಾಗುತ್ತಿಲ್ಲವಾ?-ಇದ್ದರೂ ಇರಬಹುದು. ಯಾಕೆಂದರೆ, ಜೈರಾಮ್ ರಮೇಶ್ ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ನೆಹರು-ಗಾಂಧಿ ಕುಟುಂಬದವರೇ ಕಾಂಗ್ರೆಸ್ನಲ್ಲಿ ಪ್ರಮುಖರು ಎಂದು ಹೇಳುತ್ತಿರುವವರು.
ಇದನ್ನೂ ಓದಿ: Cong Prez Poll | ಸ್ನೇಕ್ ಬೋಟ್ ರೇಸ್ನಲ್ಲಿ ರಾಹುಲ್ ಗಾಂಧಿ ಮಸ್ತಿ; ಕಾಂಗ್ರೆಸ್ ಅಧ್ಯಕ್ಷ ಗಾದಿಗ್ಯಾರು ಅಭ್ಯರ್ಥಿ?