ನವ ದೆಹಲಿ: ಅಧಿಕಾರ ಬೇಕು ಎನ್ನುವ ರಾಜಕಾರಣಿಗಳ ಮಧ್ಯೆ, ಅಧಿಕಾರ ಸಾಕು ಎನ್ನುತ್ತ ರಾಜೀನಾಮೆ ನೀಡಿದ ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿ ಜಸಿಂದಾ ಆರ್ಡರ್ನ್ ಅವರನ್ನು ಕಾಂಗ್ರೆಸ್ ಸಂಸದ, ಹಿರಿಯ ನಾಯಕ ಜೈರಾಮ್ ರಮೇಶ್ ಹೊಗಳಿದ್ದಾರೆ. ಭಾರತೀಯ ರಾಜಕಾರಣಿಗಳೂ ಅವರನ್ನು ನೋಡಿ ಕಲಿಯಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ನ್ಯೂಜಿಲ್ಯಾಂಡ್ನಲ್ಲಿ ಅಕ್ಟೋಬರ್ನಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲೇ ಜಸಿಂದಾ ಆರ್ಡರ್ನ್ ಪ್ರಧಾನಿ ಹುದ್ದೆ ತೊರೆದಿದ್ದಾರೆ. ಯಾವುದೇ ಮಹತ್ವದ ಕಾರಣವೂ ಇಲ್ಲದೆ ಇದ್ದರೂ, 6 ವರ್ಷದ ಅಧಿಕಾರವೇ ಸಾಕು ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದಾರೆ. ಫೆಬ್ರವರಿ 7ರಂದು ಅವರ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ.
ಹೀಗೆ ವೃತ್ತಿ ಜೀವನದ ಉತ್ತುಂಗದ ಸ್ಥಿತಿಯಲ್ಲಿ ಇರುವಾಗಲೇ, ಅವರಾಗಿಯೇ ಅವರು ಅಧಿಕಾರ ಬಿಡುತ್ತಿರುವ ನ್ಯೂಜಿಲ್ಯಾಂಡ್ ಪ್ರಧಾನಿಯನ್ನು ಹೊಗಳಿ, ಟ್ವೀಟ್ ಮಾಡಿದ ಜೈರಾಮ್ ರಮೇಶ್, ‘ಖ್ಯಾತ ಕ್ರಿಕೆಟ್ ಆಟಗಾರ, ವೀಕ್ಷಕ ವಿವರಣೆಗಾರನಾಗಿದ್ದ ವಿಜಯ್ ಮರ್ಚಂಟ್ ಅವರೂ ಕೂಡ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ನಿವೃತ್ತಿ ಪಡೆದರು. ಇದೀ ಜಸಿಂದಾ ಅವರೂ ಮರ್ಚಂಟ್ ದಾರಿಯನ್ನೇ ತುಳಿದಿದ್ದಾರೆ. ತಾವೇ ಅಧಿಕಾರ ತ್ಯಜಿಸುತ್ತಿದ್ದಾರೆ. ‘ಇವರು ಯಾಕೆ ಹೋಗುತ್ತಿಲ್ಲ ಎಂದು ಜನ ಅಸಮಾಧಾನ ಪಟ್ಟುಕೊಳ್ಳುವುದಕ್ಕೂ ಮೊದಲು, ಇವರು ಯಾಕೆ ಅಧಿಕಾರ ಬಿಟ್ಟು ಹೋಗುತ್ತಿದ್ದಾರೆ ಎಂದು ಜನರು ಪ್ರಶ್ನಿಸುವಂತೆ ಮಾಡಿ ಹೋಗಬೇಕು. ಭಾರತದ ಹೆಚ್ಚೆಚ್ಚು ರಾಜಕೀಯ ನಾಯಕರು ಜಸಿಂದಾ ಆರ್ಡರ್ನ್ ದಾರಿಯಲ್ಲಿ ನಡೆಯಬೇಕು’ ಎಂದು ಹೇಳಿದ್ದಾರೆ. ಅಂದರೆ ಸುದೀರ್ಘ ಸಮಯದಿಂದ ಅಧಿಕಾರದಲ್ಲಿ ಇರುವವರು ಅವರಾಗಿಯೇ ತಮ್ಮ ಸಮಯ ಅರಿತುಕೊಂಡು ಹೊರಡಬೇಕು ಎಂದು ಹೇಳಿದ್ದಾರೆ.