Site icon Vistara News

NDA vs INDIA: ಅವಿಶ್ವಾಸ ನಿರ್ಣಯಕ್ಕೆ ‘ಇಂಡಿಯಾ’ ಸಜ್ಜು; ಜೈಶಂಕರ್‌, ನಿರ್ಮಲಾ ಸೀತಾರಾಮನ್‌ ತಿರುಗೇಟು

NDA vs INDIA On Confidence Motion

Jaishankar, Sitharaman lead attack on INDIA ahead of no-confidence motion

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲೇಬೇಕು ಎಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು (NDA vs INDIA) ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ ಬೆನ್ನಲ್ಲೇ, ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ವಿರುದ್ಧ ಕೇಂದ್ರ ಸಚಿವರಾದ ಎಸ್.ಜೈಶಂಕರ್‌, ನಿರ್ಮಲಾ ಸೀತಾರಾಮನ್‌ ಸೇರಿ ಹಲವರು ತಿರುಗೇಟು ನೀಡುತ್ತಿದ್ದಾರೆ. ಮಣಿಪುರ ವಿಷಯವೀಗ ಪ್ರತಿಪಕ್ಷಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

“ಬೇರೆ ದೇಶವು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದವರು ಈಗ I.N.D.I.A ಎಂಬ ಮುಸುಕು ಹೊದ್ದು ನಿಂತಿದ್ದಾರೆ. ಆದರೆ, ಇವರ ಬಗ್ಗೆ ಯಾರಿಗೂ ಚಿಂತೆ ಬೇಡ. ಜನ ಇವರನ್ನು ನೋಡುತ್ತಿದ್ದಾರೆ ಹಾಗೂ ಇವರ ನಡೆ ಏನು ಎಂಬುದನ್ನು ಗಮನಿಸುತ್ತಿದ್ದಾರೆ” ಎಂದು ಎಸ್‌. ಜೈಶಂಕರ್‌ ಟ್ವೀಟ್‌ (X) ಮಾಡಿದ್ದಾರೆ.

ಎಸ್‌. ಜೈಶಂಕರ್‌ ಟಾಂಗ್‌

ಹಾಗೆಯೇ, ನಿರ್ಮಲಾ ಸೀತಾರಾಮನ್‌ ಅವರು ಕೂಡ ಪ್ರತಿಪಕ್ಷಗಳ ಒಕ್ಕೂಟಕ್ಕೆ ಟಾಂಗ್‌ ನೀಡಿದ್ದಾರೆ. “ಭಾರತದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಬೀಳಿಸಲು ಯಾರು ಪಾಕಿಸ್ತಾನದ ಸಹಾಯ ಬೇಡಿದ್ದರೋ, ಈಗ ಅವರೇ I.N.D.I.A ಎಂಬ ಹೆಸರನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ಯಾರು, ಬರೀ ಹಿಂದಿಯನ್ನಷ್ಟೇ ಬಳಸಬಾರದು ಎಂದು ಉಪನ್ಯಾಸ ನೀಡಿದ್ದರೋ, ಅವರೇ ಈಗ ‘ಭಾರತ’ವನ್ನು ಮರೆತು I.N.D.I.A ಎಂಬ ಹೆಸರಿಟ್ಟುಕೊಂಡಿದ್ದಾರೆ. ಯಾರು ದೇಶವನ್ನು ಒಂದೇ ಕುಟುಂಬ ಆಳಲು ಶಕ್ತ ಎಂದು ಭಾವಿಸಿ ದೇಶವನ್ನು ಮರೆತಿದ್ದರೋ, ಅವರೇ ಈಗ I.N.D.I.A ಎಂದು ನೆನಪಿಸುತ್ತಿದ್ದಾರೆ. ಇವರ ಅವಕಾಶವಾದವನ್ನು ಜನ ನೋಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ವ್ಯಂಗ್ಯ

ಇದನ್ನೂ ಓದಿ: NDA vs INDIA: ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು UPA ಎಂಬ ಹೆಸರನ್ನು I.N.D.I.A ಎಂಬುದಾಗಿ ಬದಲಾಯಿದ್ದಕ್ಕೆ ಟೀಕೆ ಮಾಡಿದ್ದು, ಇದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟಾಂಗ್‌ ಕೊಟ್ಟಿದ್ದಾರೆ. “ಬಾಣ ಸರಿಯಾದ ಜಾಗಕ್ಕೇ ನೆಟ್ಟಿದೆ ಹಾಗೂ ತುಂಬ ನೋವುಂಟು ಮಾಡಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಅರವಿಂದ್‌ ಕೇಜ್ರಿವಾಲ್‌ ತಿರುಗೇಟು

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ತೀರ್ಮಾನಿಸಿದ್ದು, ಬುಧವಾರ (ಜುಲೈ 26) ಈ ಕುರಿತು ಲಿಖಿತ ಸೂಚನೆ ನೀಡಿ, ನಿರ್ಣಯ ಮಂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿವೆ ಎಂದು ತಿಳಿದುಬಂದಿದೆ.

Exit mobile version