ನವದೆಹಲಿ: ಕಾಲುವೆ ಪಕ್ಕದಲ್ಲಿ ಪೊಲೀಸ್ ಅಧಿಕಾರಿಯ ಶವ (Cop Found Dead) ದೊರೆತ 48 ಗಂಟೆಯಲ್ಲೇ ಕೊಲೆ ಪ್ರಕರಣವನ್ನು ಸುಧಾರಿತ ತಾಂತ್ರಿಕ ತನಿಖಾ ವಿಧಾನಗಳ ಮೂಲಕ ಜಲಂಧರ್ ಪೊಲೀಸ್ (Jalandhar Police) ಭೇದಿಸಿದ್ದಾರೆ. ಕೊಲೆಯಾದ ಪೊಲೀಸ್ ಅಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ (Dalbir Singh Deol) ಅವರು ಪೊಲೀಸ್ ಇಲಾಖೆ ಸೇರುವ ಮುಂಚೆ ವೇಯ್ಟ್ ಲಿಫ್ಟರ್ ಆಗಿದ್ದರು. ಅವರಿಗೆ ಅರ್ಜುನ ಪ್ರಶಸ್ತಿ (Arjun Award) ಕೂಡ ದೊರೆತಿತ್ತು. ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು(Shot Dead).
ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದಾರೆ. ಕೂಡಲೇ ಅವರು ತಮ್ಮ ಸಹೋದ್ಯೋಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ, ತನಿಖೆಯನ್ನೂ ಆರಂಭಿಸಿದ್ದಾರೆ.
ತನಿಖೆಯ ಭಾಗವಾಗಿ, ಪೊಲೀಸರು ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅವುಗಳ ಪೈಕಿ ಒಂದರಲ್ಲಿ ಡಿಯೋಲ್ ಆಟೋರಿಕ್ಷಾವನ್ನು ಬಾಡಿಗೆ ಪಡೆದುಕೊಂಡಿರುವುದನ್ನು ದಾಖಲಾಗಿದೆ. ಬಳಿಕ, ಆಟೋರಿಕ್ಷಾ ನಂಬರ್ ದಾಖಲಿಸಿಕೊಂಡು, ಅದು ಹೋಗ ಬಹುದಾದ ಸಂಭವನೀಯ ಮಾರ್ಗಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿ, ವಾಹನ ಎಲ್ಲೆಲ್ಲಿ ಹೋಗಿದೆ ಎಂಬುದನ್ನು ಪತ್ತೆ ಹಚ್ಚಿದರು. ಇದೇ ವೇಳೆ, ಹತ್ತಿರದ ಟವರ್‌ನಿಂದ ಕಾಲುವೆ ಪ್ರದೇಶದಲ್ಲಿ ಸಕ್ರಿಯವಾಗಿರುವ ಮೊಬೈಲ್ ಸಿಗ್ನಲ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆಗ ಆರೋಪಿಯ ಪತ್ತೆಯಾಗಿದ್ದಾನೆ.
ಆರೋಪಿಯನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತ, ಪೊಲೀಸ್ ಅಧಿಕಾರಿ ಬಾಡಿಗೆ ಪಡೆದ ಆಟೋ ಚಾಲಕನಾಗಿದ್ದಾನೆ. ಆರೋಪಿಯ ಡಿಯೋಲ್ ಅವರಿಂದ ಸರ್ವೀಸ್ ಪಿಸ್ತೂಲ್ ಅನ್ನು ಕಸಿದುಕೊಂಡು, ಅವರ ಹಣೆಗೆ ಗುಂಡಿಟ್ಟುಕೊಂದಿದ್ದಾನೆ. ಡಿಯೋಲ್ ಶವದ ಬಳಿಕ ಪಿಸ್ತೂಲ್ ಕೂಡ ಪತ್ತೆಯಾಗಿತ್ತು.
ನಮಗೆ ದಲ್ಬೀರ್ ಸಿಂಗ್ ಡಿಯೋಲ್ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಯಿತು. ಅವರ ಶವ ಪತ್ತೆಯಾಗಿರುವ ಸ್ಥಳ ಜಲಂಧರ್ ನಿಂದ 6-7 ಕಿ.ಮೀ ದೂರದಲ್ಲಿದೆ. ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕ ವಿಜಯ್ ಕುಮಾರ್ ಎಂಬಾತನನ್ನು ಬಂಧಿಸಿದ್ದೇವೆ ಎಂದು ಜಲಂಧರ್ ಪೊಲೀಸ್ ಮುಖ್ಯಸ್ಥ ಸ್ವಪನ್ ಶರ್ಮಾ ತಿಳಿಸಿದ್ದಾರೆ.
ತನ್ನ ಗ್ರಾಮಕ್ಕೆ ಬಿಡುವಂತೆ ಆಟೋರಿಕ್ಷಾ ಚಾಲಕ ವಿಜಯ್ ಕುಮಾರ್‌ಗೆ ಪೊಲೀಸ್ ಅಧಿಕಾರಿ ಡಿಯೋಲ್ ಹೇಳಿದ್ದಾರೆ. ಅದಕ್ಕೆ, ಆಟೋ ಚಾಲಕ ನಿರಾಕರಿಸಿದ್ದಾನೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಜಗಳದ ಮಧ್ಯೆಯೇ ಡಿಯೋಲ್ ಅವರ ಬಳಿ ಇದ್ದ ಸರ್ವೀಸ್ ಪಿಸ್ತೂಲ್ ಆರೋಪಿ ಕಸಿದುಕೊಂಡಿದ್ದಾನೆ ಮ್ತತು ಅವರ ಹಣೆಗೆ ಗುಂಡು ಹೊಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Amritpal Singh: ‘ಅಮೃತ್ಪಾಲ್ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್