ನವ ದೆಹಲಿ: ಇತಿಹಾಸ ಪ್ರಸಿದ್ಧ, ದೆಹಲಿಯ ಜಾಮಾ ಮಸೀದಿಯ ಮೂರು ಪ್ರವೇಶ ದ್ವಾರಗಳಲ್ಲಿ ಫಲಕಗಳನ್ನು ಹಾಕಲಾಗಿದ್ದು, ಅದರ ಮೇಲೆ ‘ಹುಡುಗಿಯರು/ಮಹಿಳೆಯರು ಗುಂಪಾಗಿಯಾಗಲೀ, ಒಬ್ಬಂಟಿಯಾಗಿ ಆಗಲೀ ಮಸೀದಿ ಪ್ರವೇಶಿಸುವಂತಿಲ್ಲ’ ಎಂದು ದೊಡ್ಡದಾಗಿ ಬರೆಯಲಾಗಿದೆ. ಅಂದರೆ ಜಾಮಾ ಮಸೀದಿಗೆ ಇನ್ನು ಹುಡುಗಿಯರು ಗುಂಪಾಗಿ ಮತ್ತು ಏಕಾಂಗಿಯಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ಇದು ಜಾಮಾ ಮಸೀದಿಯ ಆಡಳಿತ ಮಂಡಳಿಯ ಆದೇಶವಾಗಿದೆ. ಈ ಆದೇಶದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಷ್ಟು ದಿನ ಜಾಮಾ ಮಸೀದಿಗೆ ಮಹಿಳೆಯರಷ್ಟೇ ಗುಂಪಾಗಿ ಹೋಗಬಹುದಿತ್ತು. ಇದೊಂದು ಪ್ರವಾಸಿ ಸ್ಥಳವಾಗಿದ್ದು, ಆಗಮಿಸುವ ಪ್ರವಾಸಿಗರೂ ಕೂಡ ಮಸೀದಿ ಪ್ರವೇಶ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಮಹಿಳೆಯರಷ್ಟೇ ಗುಂಪುಗುಂಪಾಗಿ ಹೋಗಲು ಸಾಧ್ಯವಿಲ್ಲ. ಯಾವುದೇ ಹುಡುಗಿ/ಮಹಿಳೆ ಏಕಾಂಗಿಯಾಗಲೂ ಹೋಗುವಂತಿಲ್ಲ. ಹಾಗಂತ ಮಹಿಳೆಯರಿಗೆ ಪ್ರವೇಶವೇ ಇಲ್ಲ ಎಂತಲೂ ಅಲ್ಲ. ಅವರು ತಮ್ಮ ಪತಿಯೊಂದಿಗೋ, ಸಹೋದರ/ ತಂದೆ/ ಇನ್ನಿತರ ಕುಟುಂಬ ಸದಸ್ಯರ ಜತೆ ಮಸೀದಿಯೊಳಕ್ಕೆ ಹೋಗಬಹುದು ಎಂದು ಜಾಮಾ ಮಸೀದಿ ತನ್ನ ಆದೇಶದಲ್ಲಿ ತಿಳಿಸಿದೆ.
ಆದರೆ ಜಾಮಾ ಮಸೀದಿಯ ಈ ಆದೇಶ ಅಪಾರ ಟೀಕೆಗೆ ವ್ಯಕ್ತವಾಗಿದೆ. ಮುಸ್ಲಿಂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಇಡೀ ವಿಶ್ವದಾದ್ಯಂತ ಹೋರಾಡುತ್ತಿದ್ದಾರೆ. ಅಂಥ ಹೊತ್ತಲ್ಲೇ ದೆಹಲಿ ಜಾಮಾ ಮಸೀದಿ ಆಡಳಿತ ಮಂಡಳಿ ಇಂಥ ಸೂಚನಾ ಫಲಕ ಹಾಕಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಮುಸ್ಲಿಂ ರಾಷ್ಟ್ರೀಯ ವೇದಿಕೆ ವಕ್ತಾರ ಶಾಹೀದ್ ಸಯೀದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಜಾಮಾ ಮಸೀದಿ ಆಡಳಿತ ಮಂಡಳಿಯ ಈ ಆದೇಶ ಸರಿಯಲ್ಲ. ಇಂಥ ಮನಸ್ಥಿತಿ ಒಳ್ಳೆಯದಲ್ಲ. ಮಹಿಳೆಯರನ್ನು ಯಾಕೆ ಎರಡನೇ ದರ್ಜೆಯವರಂತೆ ನಡೆಸಿಕೊಳ್ಳಬೇಕು? ಪೂಜಾ ಸ್ಥಳಗಳಲ್ಲಿ ಈ ತಾರತಮ್ಯ ತಪ್ಪು’ ಎಂದಿದ್ದಾರೆ.
ವಿಎಚ್ಪಿ ಖಂಡನೆ
ಜಾಮಾ ಮಸೀದಿ ಆಡಳಿತ ಮಂಡಳಿಯ ನಿರ್ಧಾರವನ್ನು ವಿಶ್ವ ಹಿಂದು ಪರಿಷತ್ ಕೂಡ ಖಂಡಿಸಿದೆ. ಇದು ಮಹಿಳಾ ವಿರೋಧಿ ನಡವಳಿಕೆ ಎಂದು ಹೇಳಿದ್ದಲ್ಲದೆ, ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಷ್ಟ್ರೀ ಮಹಿಳಾ ಆಯೋಗವನ್ನು ಆಗ್ರಹಿಸಿದೆ.
ಇದನ್ನೂ ಓದಿ: ಆಗ್ರಾ ಜಾಮಾ ಮಸೀದಿಯಲ್ಲೂ ದೇವರ ಮೂರ್ತಿ ಇರಬಹುದಾ? ಉತ್ಖನನ ಕೋರಿ ಹೈಕೋರ್ಟ್‌ಗೆ ಅರ್ಜಿ