Site icon Vistara News

ದೆಹಲಿ ಪಾರ್ಕಿಂಗ್‌ ಸ್ಥಳದಲ್ಲಿ ಭೀಕರ ಬೆಂಕಿ; ಸುಟ್ಟು ಕರಕಲಾದ ಎಲೆಕ್ಟ್ರಿಕ್‌ ವಾಹನಗಳು

Delhi Fire

ನವ ದೆಹಲಿ: ದೆಹಲಿಯ ಜಾಮಿಯಾ ನಗರದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪಾರ್ಕಿಂಗ್‌ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ (Jamia Nagar Fire) ಹೊತ್ತಿ ಉರಿದು, ಎಲೆಕ್ಟ್ರಿಕ್‌ ಕಾರುಗಳು, ರಿಕ್ಷಾಗಳು ಸೇರಿ ಸುಮಾರು ನೂರು ವಾಹನಗಳು ಸುಟ್ಟು ಕರಕಲಾಗಿವೆ. ಪಾರ್ಕಿಂಗ್‌ ಸ್ಥಳದಲ್ಲಿ ಹಲವು ವಾಹನಗಳು ಸುಟ್ಟು ಭಸ್ಮವಾಗಿ ಬಿದ್ದಿರುವ ಫೋಟೋಗಳು ವೈರಲ್‌ ಆಗುತ್ತಿವೆ. ಜಾಮಿಯಾ ನಗರದ ಮೇನ್‌ ಟಿಕೋನಾ ಪಾರ್ಕ್‌ ಬಳಿಯ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಇಂದು ಮುಂಜಾನೆ 5ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕದಳದ ಸುಮಾರು 11 ಘಟಕಗಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೂ ಅನೇಕ ವಾಹನಗಳು ಬೆಂಕಿಗೆ ಆಹುತಿ ಆಗಿದ್ದವು.

ಅಗ್ನಿ ಶಾಮಕ ದಳದವರ ನಿರಂತರ ಪ್ರಯತ್ನದಿಂದ ಬೆಂಕಿ ನಂದಿತು. ಅಷ್ಟರಲ್ಲಿ ಸುಮಾರು 10 ಕಾರುಗಳು, 1 ಮೋಟರ್‌ ಸೈಕಲ್‌, 2 ಸ್ಕೂಟಿ, 30 ಹೊಸ ಆಟೋ ರಿಕ್ಷಾಗಳು, 50 ಹಳೇ ಎಲೆಕ್ಟ್ರಿಕ್‌ ರಿಕ್ಷಾಗಳು ಸುಟ್ಟಿದ್ದವು ಅದರಲ್ಲೂ ಒಂದಷ್ಟು ಸಂಪೂರ್ಣ ಭಸ್ಮವೇ ಆಗಿವೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ. ಅದೃಷ್ಟಕ್ಕೆ, ಯಾರದ್ದೂ ಪ್ರಾಣ ಹೋಗಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ ಎಂದು ಮಾಹಿತಿ ನೀಡಿದೆ.

ಬೆಂಕಿಗೆ ಆಹುತಿಯಾದ ವಾಹನಗಳು

ಇದನ್ನೂ ಓದಿ: ದೆಹಲಿ ಅಗ್ನಿ ಅವಘಡ; ಪರಾರಿ ಆಗಿದ್ದ ಕಟ್ಟಡ ಮಾಲೀಕನನ್ನು ಬಂಧಿಸಿದ ಪೊಲೀಸ್‌

ದೆಹಲಿಯಲ್ಲಿ ಉಷ್ಣ ಅಲೆಯ ವಾತಾವರಣವಿದ್ದು ಭಯಂಕರ ಬಿಸಿಲಿನಿಂದ ಜನ ಪರದಾಡುತ್ತಿದ್ದಾರೆ. ಈ ಮಧ್ಯೆ ಪದೇಪದೆ ಅಗ್ನಿ ಅವಘಗಳೂ ನಡೆಯುತ್ತಿವೆ. ಇತ್ತೀಚೆಗೆ ಮುಂಡ್ಕಾದಲ್ಲಿ ನಾಲ್ಕಂತಸ್ತಿನ ಕಟ್ಟಡದಲ್ಲಿ ಭೀಕರ ಬೆಂಕಿ ದುರಂತ ಉಂಟಾಗಿತ್ತು. ಅದರಲ್ಲಿ 27 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಹೀಗೆ ಸಾವನ್ನಪ್ಪಿದವರಲ್ಲಿ ಹಲವರ ಗುರುತು ಸಹ ಪತ್ತೆಯಾಗದೆ ಡಿಎನ್‌ಎ ಟೆಸ್ಟ್‌ಗಳನ್ನು ನಡೆಸಲಾಗಿದೆ.

ಇದನ್ನೂ ಓದಿ: ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ

Exit mobile version