Site icon Vistara News

ಚಾರಿತ್ರಿಕ ಪ್ರಮಾದಗಳನ್ನು ಕೋರ್ಟ್‌ನಲ್ಲಿ ಸರಿಪಡಿಸಲಾಗದು ಎಂದ ಜಮೀಯತ್ ನಿಂದ ಸುಪ್ರೀಂಕೋರ್ಟ್‌ ಗೆ ಅರ್ಜಿ

supremecourt

ನವದೆಹಲಿ: ಜ್ಞಾನವಾಪಿ ಮಸೀದಿ ಕುರಿತ ವಿವಾದಕ್ಕೆ ಸಂಬಂಧಿಸಿ ಮುಸ್ಲಿಂ ಧಾರ್ಮಿಕ ಸಂಘಟನೆ ಜಮೀಯತ್‌ ಉಲೇಮಾ-ಇ-ಹಿಂದ್‌, ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಚಾರಿತ್ರಿಕ ಪ್ರಮಾದಗಳನ್ನು ಕೋರ್ಟ್‌ನಿಂದ ಸರಿಪಡಿಸಲಾಗದು ಎಂದು ವಾದಿಸಿದೆ.

ಪೂಜಾ ಸ್ಥಳಗಳ ಆರಾಧನಾ ಕಾಯಿದೆ-1991ಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣದ ವಿಚಾರಣೆಯಲ್ಲಿ ಪ್ರತಿವಾದಿಯಾಗಿ ಸೇರಿಸಿಕೊಳ್ಳಬೇಕು ಎಂದು ಜಮೀಯತ್‌ ಉಲೇಮಾ-ಇ-ಹಿಂದ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಇಸ್ಲಾಮಿಕ್‌ ಆಡಳಿತದ ಕಾಲದಲ್ಲಿ ಹಲವು ದೇವಾಲಯಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತಿಸಲಾಗಿತ್ತು. ಇದನ್ನು ಮತ್ತೆ ದೇವಾಲಯಗಳಾಗಿ ಪರಿವರ್ತಿಸಲು 1991ರ ಪೂಜಾ ಸ್ಥಳಗಳ ಕಾಯಿದೆ ತೊಡಕಾಗಿ ಪರಿಣಮಿಸಿದೆ ಎಂದು ಪ್ರತಿಪಾದಿಸಿ, ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಅಶ್ವಿನಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದೀಗ ಜಮೀಯತ್‌ ಉಲೇಮಾ ಪರ ವಕೀಲರಾದ ಇಜಾಜ್‌ ಮಕ್ಬಲ್‌, ನ್ಯಾಯಾಲಯದ ವಿಚಾರಣೆಗಳ ಮೂಲಕ ಚಾರಿತ್ರಿಕ ಪ್ರಮಾದಗಳನ್ನು ಸರಿಪಡಿಸಲಾಗದು ಎಂದು ಹೇಳಿದ್ದಾರೆ.

ಜಮೀಯತ್‌ ಸಂಘಟನೆಯು 2019ರ ನವೆಂಬರ್‌ 19ರ ಅಯೋಧ್ಯಾ ತೀರ್ಪನ್ನು ಉಲ್ಲೇಖಿಸಿದ್ದು, ಅದರಲ್ಲಿ ಹೇಳಿರುವ, ” ಗತಕಾಲಕ್ಕೆ ತೆರಳಲು ಕಾನೂನನ್ನು ಸಾಧನವಾಗಿ ಬಳಸಬಾರದು. ಚರಿತ್ರೆಯಲ್ಲಿ ನಡೆದಿರುವ ಎಲ್ಲ ಪ್ರಮಾದಗಳಿಗೂ ಕಾನೂನಿನ ಅಸ್ತ್ರ ಪರಿಹಾರವಲ್ಲ . ಅದರ ಕಾನೂನಾತ್ಮಕ ಪರಿಣಾಮಗಳನ್ನು ವರ್ತಮಾನದ ಕಾಲದಲ್ಲಿ ಜಾರಿಗೆ ತರಲು ಸಾಧ್ಯವಿದ್ದರೆ ಮಾತ್ರ ಅಂಥ ನಡೆಯನ್ನು ತೆಗೆದುಕೊಳ್ಳಬಹುದುʼ ಎಂಬ ಅಂಶವನ್ನು ಪ್ರತಿಪಾದಿಸಿದೆ.

Exit mobile version