ಶ್ರೀನಗರ: ಭಾರತ ಕೈಗೊಂಡಿರುವ ಚಂದ್ರಯಾನ 3 (Chandrayaan 3) ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಇಸ್ರೋ ವಿಜ್ಞಾನಿಗಳು ಜಾಗತಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಜ್ಞಾನ್ ರೋವರ್ ಈಗಾಗಲೇ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕದ ಜತೆಗೆ ಅಲ್ಯೂಮಿನಿಯಂ (AI), ಕ್ಯಾಲ್ಶಿಯಂ (Ca), ಐರನ್ (Fe), ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si) ಹಾಗೂ ಆಮ್ಲಜನಕದ (O) ಅಂಶಗಳನ್ನೂ ಪ್ರಜ್ಞಾನ್ ರೋವರ್ ಪತ್ತೆಹಚ್ಚಿದೆ. ಹಾಗೆಯೇ ಅಧ್ಯಯನ ಮುಂದುವರಿಸಿದೆ. ಇದರ ಬೆನ್ನಲ್ಲೇ, ಜಮ್ಮು ಉದ್ಯಮಿಯೊಬ್ಬರು ಚಂದ್ರನ ಅಂಗಳದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದಾರೆ.
ಹೌದು, ಭಾರತ ಚಂದ್ರಯಾನ 3 ಕೈಗೊಂಡ ಬೆನ್ನಲ್ಲೇ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಜಮ್ಮು ಉದ್ಯಮಿ ರೂಪೇಶ್ ಮಸೋನ್ (Rupesh Masson) ಎಂಬುವರು ಚಂದ್ರನ ಅಂಗಳದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದಾರೆ. ಅದೂ ಆನ್‌ಲೈನ್ ಮೂಲಕವೇ ಇಷ್ಟೊಂದು ಜಾಗ ಖರೀದಿಸಿರುವುದು ಅಚ್ಚರಿ ಮೂಡಿಸಿದೆ.
ಯುಟ್ಯೂಬ್ ಚಾನೆಲ್‌ಗೆ ರೂಪೇಶ್ ಸಂದರ್ಶನ
ಇವರು ಜಾಗ ಖರೀದಿಸಿದ್ದು ಹೇಗೆ?
ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿರುವ ಕುರಿತು ಸುದ್ದಿ ಮಾಧ್ಯಮಗಳು, ಯುಟ್ಯೂಬ್ ಚಾನೆಲ್‌ಗಳಿಗೆ ರೂಪೇಶ್ ಮಸೋನ್ ಮಾಹಿತಿ ನೀಡಿದ್ದಾರೆ. ಹಾಗೆಯೇ, ಹೇಗೆ ಆನ್‌ಲೈನ್ ಮೂಲಕ ಜಾಗ ಖರೀದಿಸಿದೆ ಎಂಬುದನ್ನೂ ತಿಳಿಸಿದ್ದಾರೆ. “ಆನ್‌ಲೈನ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ದಿ ಲೂನಾರ್ ರಿಜಿಸ್ಟ್ರಿ ಮೂಲಕ ಜಾಗ ಖರೀದಿಸಿದ್ದೇನೆ. ಇದರಿಂದ ನನಗೆ ತುಂಬ ಸಂತೋಷವಾಗಿದೆ” ಎಂದು ಅವರು ತಿಳಿಸಿದ್ದಾರೆ. ಲಸುಸ್ ಫೆಸಿಲಿಟೀಸ್ ಎಂಬಲ್ಲಿ ಇವರು ಒಂದು ಎಕರೆ ಜಾಗ ಖರೀದಿಸಿದ್ದಾರೆ. ಆದರೆ, ಅವರು ಎಷ್ಟು ದುಡ್ಡು ಕೊಟ್ಟು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Chandrayaan 3: ಚಂದಮಾಮನ ಅಂಗಳದಲ್ಲಿ ‘ರೋವರ್’ ಮಗುವಿನಾಟ! ಹುಷಾರ್, ಚಂದ್ರ ಕಂಪಿಸುತ್ತಿದೆ ಎಂದ ಲ್ಯಾಂಡರ್!
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಮಿಷನ್‌ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.