Site icon Vistara News

Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ

indian army

Jammu Kashmir: 5 terrorists killed in Kulgam as anti-terror operation enters Day 2

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿರ್ಮೂಲನೆಗೆ ಪಣ ತೊಟ್ಟಿರುವ ಭಾರತೀಯ ಸೇನೆಗೆ ಭರ್ಜರಿ ಮುನ್ನಡೆ ದೊರೆತಿದೆ. ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಭಾರತೀಯ ಸೇನೆಯು (Indian Army) ಜಂಟಿಯಾಗಿ ಕೈಗೊಂಡ ಕಾರ್ಯಾಚರಣೆ (Kashmir Encounter) ವೇಳೆ ಲಷ್ಕರೆ ತಯ್ಬಾ (Lashkar e Taiba) ಉಗ್ರ ಸಂಘಟನೆಯ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಗುರುವಾರ (ನವೆಂಬರ್‌ 16) ಸಂಜೆಯೇ ಸೇನೆಯು ಕಾರ್ಯಾಚರಣೆ ಕೈಗೊಂಡಿದೆ. ಇದೇ ವೇಳೆ ಲಷ್ಕರೆ ತಯ್ಬಾ ಕಮಾಂಡರ್ ಬಶೀರ್ ಅಹ್ಮದ್ ಮಲಿಕ್‌ ಸೇರಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಇನ್ನು ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದರೊಂದಿಗೆ 24 ಗಂಟೆಯಲ್ಲಿ ಕಾಶ್ಮೀರದಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಿದಂತಾಗಿದೆ.

ಕುಲ್ಗಾಮ್‌ ಜಿಲ್ಲೆಯ ಸುಮ್ನೊ, ನೆಹಾಮ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಸೈನಿಕರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (CRPF), 34 ರಾಷ್ಟ್ರೀಯ ರೈಫಲ್ಸ್‌, 9 ಪ್ಯಾರಾ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೂ, ಪರಾಕ್ರಮ ಮೆರೆದ ಭದ್ರತಾ ಸಿಬ್ಬಂದಿಯು ಐವರು ಉಗ್ರರನ್ನು ಹತ್ಯೆ ಮಾಡಿದೆ.

ಒಂದು ವಾರದ ಹಿಂದಷ್ಟೇ ಭಾರತೀಯ ಸೇನೆಯು ಒಬ್ಬ ಉಗ್ರನನ್ನು ಎನ್‌ಕೌಂಟರ್‌ ಮಾಡಿತ್ತು. ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರ ಬಲಿಯಾಗಿದ್ದ. ಕಥೊಹಾಲನ್‌ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ ವೇಳೆ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (The Resistance Front) ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಹತ ಉಗ್ರನನ್ನು ಮೈಸರ್‌ ಅಹ್ಮದ್‌ ದರ್‌ ಎಂಬುದಾಗಿ ಗುರುತಿಸಲಾಗಿತ್ತು.

ಇದನ್ನೂ ಓದಿ: ಪಾಕ್‌ನಲ್ಲಿ ‘ಅಪರಿಚಿತರ’ ಗುಂಡಿಗೆ ಜೈಶೆ ಮೊಹಮ್ಮದ್‌ ಉಗ್ರ ಬಲಿ; ವಾರದಲ್ಲಿ ಇಬ್ಬರು ಉಗ್ರರ ಹತ್ಯೆ!

100ಕ್ಕೂ ಅಧಿಕ ಉಗ್ರರು ಸಕ್ರಿಯ

ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ 30ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version