ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರರ ಉಪಟಳ ಮುಂದುವರಿದಿದೆ. ದೋಡಾ ಜಿಲ್ಲೆಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ (Kashmir Encounter) ಒಬ್ಬ ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಯ ವೇಳೆ ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ದೋಡಾ ಜಿಲ್ಲೆಯ ದೇಸಾ ಎಂಬ ಪ್ರದೇಶದ ಅರಣ್ಯದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಸೋಮವಾರ (ಜುಲೈ 16) ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಉಗ್ರರಿಗಾಗಿ ನಡೆದ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ಯೋಧರು ಕೂಡ ಗುಂಡಿನ ದಾಳಿ ಆರಂಭಿಸಿದ್ದಾರೆ. ರಾತ್ರೋರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
#WATCH | Morning visuals from the Doda area of Jammu & Kashmir.
— ANI (@ANI) July 16, 2024
An Encounter started late at night in the Dessa area of Doda in which some of the Indian Army troops got injured.
(Visuals deferred by unspecified time) pic.twitter.com/ZQdSSRSjun
ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಜಾಸ್ತಿಯಾಗಿರುವ ಕಾರಣ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಜುಲೈ 6 ಮತ್ತು 7 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು. ಇದಾದ ಕೇವಲ ಒಂದು ವಾರದ ನಂತರ ಈ ಕಾರ್ಯಾಚರಣೆಯು ನಡೆದಿದೆ. ಸೈನಿಕರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರು ಇತ್ತೀಚೆಗೆ ದಾಳಿ ನಡೆಸುತ್ತಿದ್ದಾರೆ.
ಕುಪ್ವಾರ ಜಿಲ್ಲೆಯಲ್ಲಿ ಸೋಮವಾರ (ಜುಲೈ 15) ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು. ಎಲ್‌ಒಸಿಯಲ್ಲಿ ಕುಪ್ವಾರದ ಕೆರಾನ್ ಸೆಕ್ಟರ್‌ನಲ್ಲಿ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಲಾಯಿತು. “ಕೆರಾನ್ ಸೆಕ್ಟರ್‌ನಲ್ಲಿನ ಎಲ್‌ಒಸಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ-ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಚಿನಾರ್ ಕಾರ್ಪ್ಸ್ ಎಕ್ಸ್‌ನ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಗುಂಡಿನ ದಾಳಿಗೆ ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ