Site icon Vistara News

Formula 4 Race: ಕಲ್ಲೆಸೆಯುತ್ತಿದ್ದ ಕಾಶ್ಮೀರದಲ್ಲೀಗ ಕಾರ್‌ ರೇಸ್‌; ಮೋದಿ ಮೆಚ್ಚುಗೆ

Car Race In Kashmir

Jammu Kashmir hosts first-ever Formula-4 race to promote tourism, PM Narendra Modi Lauds

ಶ್ರೀನಗರ: ಸೈನಿಕರ ಮೇಲೆ ಕಲ್ಲು ತೂರಾಟ, ಉಗ್ರರ ದಾಳಿ, ಪ್ರತ್ಯೇಕತವಾದಿಗಳಿಂದ ಭಾರತ ವಿರೋಧಿ ಘೋಷಣೆಗಳಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು-ಕಾಶ್ಮೀರದಲ್ಲೀಗ (Jammu Kashmir) ಬದಲಾವಣೆಯ ಗಾಳಿ ಬೀಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಜಿ-20 ಶೃಂಗಸಭೆ (G20 Summit 2024) ಆಯೋಜಿಸುವ ಮಟ್ಟಿಗೆ, ಸಚಿನ್‌ ತೆಂಡೂಲ್ಕರ್‌ ಅವರು ಗಲ್ಲಿ ಕ್ರಿಕೆಟ್‌ ಆಡುವಮಟ್ಟಿಗೆ ಕಣಿವೆಯಲ್ಲಿ ಶಾಂತಿ ನೆಲೆಸಿದೆ. ಇದರ ಬೆನ್ನಲ್ಲೇ, ಶ್ರೀನಗರದಲ್ಲಿ ಇದೇ ಮೊದಲ ಬಾರಿಗೆ ಫಾರ್ಮುಲಾ 4 ರೇಸ್‌ (Formula 4 Race) ಆಯೋಜನೆ ಮಾಡಲಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್‌ ಸರೋವರದ ತೀರದಲ್ಲಿ ಭಾನುವಾರ (ಮಾರ್ಚ್‌ 17) ಫಾರ್ಮುಲಾ 4 ಕಾರ್‌ ರೇಸ್‌ ಆಯೋಜಿಸಲಾಗಿತ್ತು. ಸ್ಥಳೀಯ ಯುವಕರಲ್ಲೂ ಕಾರ್‌ ರೇಸ್‌ ಕುರಿತು ಆಸಕ್ತಿ ಹುಟ್ಟಿಸುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಕಾರ್‌ ರೇಸ್‌ ಆಯೋಜಿಸಲಾಗಿತ್ತು. ಫಾರ್ಮುಲಾ 4 ರೇಸ್‌, ಇಂಡಿಯನ್‌ ರೇಸಿಂಗ್‌ ಲೀಗ್‌ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕಾರ್‌ ರೇಸ್‌ ಆಯೋಜಿಸಲಾಗಿತ್ತು. ಇದರ ಯಶಸ್ಸಿನ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ನರೇಂದ್ರ ಮೋದಿ ಶ್ಲಾಘನೆ

“ಶ್ರೀನಗರದಲ್ಲಿ ಕಾರ್‌ ರೇಸ್‌ ಯಶಸ್ವಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. “ಕಾರ್‌ ರೇಸ್‌ ನೋಡಿ ಮನ ತುಂಬಿಬಂದಿದೆ. ಇದು ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದ ಸೌಂದರ್ಯವನ್ನು ತೆರೆದಿಡಲು ಸಹಕಾರಿಯಾಗಲಿದೆ. ಭಾರತದಲ್ಲಿ ಮೋಟರ್‌ಸ್ಪೋರ್ಟ್ಸ್‌ನಲ್ಲಿ ಹತ್ತಾರು ಅವಕಾಶಗಳಿವೆ. ಇಂತಹ ರೇಸ್‌ಗಳು ನಡೆಯಲು ಶ್ರೀನಗರವು ಅದ್ಭುತ ತಾಣವಾಗಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: PM Narendra Modi: “ಹೃದಯ ಗೆಲ್ಲಲು ಬಂದಿದ್ದೇನೆ…” ಕಾಶ್ಮೀರದಲ್ಲಿ ಪ್ರಧಾನಿ ಮೋದಿ

ಶ್ರೀನಗರದ ಲಲಿತ್‌ ಘಾಟ್‌ನಿಂದ ನೆಹರೂ ಪಾರ್ಕ್‌ವರೆಗಿನ 1.7 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕಾರ್‌ ರೇಸ್‌ ಆಯೋಜಿಸಲಾಗಿತ್ತು. ಕಾರ್‌ ರೇಸ್‌ನಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿದ್ದ ಸಚಿನ್‌ ತೆಂಡೂಲ್ಕರ್‌ ಅವರು ರಸ್ತೆ ಮಧ್ಯೆಯೇ ಕ್ರಿಕೆಟ್‌ ಆಡಿದ್ದರು. ಪ್ರವಾಸದ ಬಳಿಕ ಅವರು ಜಮ್ಮು-ಕಾಶ್ಮೀರದ ಸಂದರ್ಯವನ್ನು ಮೆಚ್ಚಿಕೊಂಡಿದ್ದರು. ಎಲ್ಲರೂ ಇಲ್ಲಿಗೆ ಬರಬೇಕು ಎಂದು ಕೂಡ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version