Site icon Vistara News

Pawan Kalyan: ಆಂಧ್ರದಲ್ಲಿ ಟಿಡಿಪಿ ಜತೆ ಪವನ್ ಕಲ್ಯಾಣ್ ಮೈತ್ರಿ! ಎನ್‌ಡಿಎ ಗತಿ ಏನು?

Pawan Kalyan

ನವದೆಹಲಿ: ಆಂಧ್ರ ಪ್ರದೇಶವು (Andhra Pradesh) ಇನ್ನು ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯನ್ನು (YSR Congress Party) ಸಹಿಸಿಕೊಳ್ಳುವುದಿಲ್ಲ. ನಾನು ಇವತ್ತು ಒಂದು ನಿರ್ಧಾರ ಮಾಡಿದ್ದೇನೆ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಜನಸೇನಾ ಪಾರ್ಟಿ (Jan Sena Party) ಮತ್ತು ತೆಲುಗು ದೇಶಂ ಪಾರ್ಟಿಗಳು (Telugu Desham Party – TDP) ಜಂಟಿಯಾಗಿ ಎದುರಿಸಲಿವೆ ಎಂದು ಜನಸೇನಾ ಪಕ್ಷದ ನಾಯಕ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ಅವರು ಹೇಳಿದ್ದಾರೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಪವನ್ ಕಲ್ಯಾಣ್ ಅವರು ಗುರುತಿಸಿಕೊಂಡಿದ್ದಾರೆ. ಬಹುಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಜೈಲಿಗೆ ಹಾಕಲಾಗಿದೆ. ಅವರ ಬಂಧನವನ್ನು ಖಂಡಿಸಿ ಟಿಡಿಪಿ ಆಂಧ್ರ ಪ್ರದೇಶಾದ್ಯಂತ ಪ್ರತಿಭಟನೆ ಮಾಡಿತ್ತು.

ಆಂಧ್ರಪ್ರದೇಶವು ವೈಎಸ್‌ಆರ್‌ಸಿಪಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಇಂದು ನಿರ್ಧಾರ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜನಸೇನಾ ಮತ್ತು ಟಿಡಿಪಿ ಒಟ್ಟಿಗೆ ಹೋಗುಲಿವೆ ಎಂದು ಕಲ್ಯಾಣ್ ಸುದ್ದಿಗಾರರಿಗೆ ತಿಳಿಸಿದರು. ಈ ವೇಳೆ, ಪವನ್ ಕಲ್ಯಾಣ್ ಅವರ ಜತೆಗೆ, ನಾಯ್ಡು ಅವರ ಪುತ್ರ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಹಿಂದೂಪುರ ಶಾಸಕ ಮತ್ತು ನಾಯ್ಡು ಅವರ ಸಹೋದರ ಸಂಬಂಧಿ ನಂದಮೂರಿ ಬಾಲಕೃಷ್ಣ ಅವರಿದ್ದರು.

ರಾಜಮಹೇಂದ್ರವರಮ್ ಜೈಲಿನಲ್ಲಿ ತೆಲುಗು ದೇಶಂ ಪಾರ್ಟಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ಬಳಿಕ ಈ ವಿಷಯವನ್ನು ಪವನ್ ಕಲ್ಯಾಣ್ ಅವರು ತಿಳಿಸಿದರು. ಬಹುಕೋಟಿ ಕೌಶಲ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಸಿಐಡಿ ಬಂಧಿಸಿದೆ.

ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಖಂಡಿಸಿರುವ ಪವನ್ ಕಲ್ಯಾಣ್ ಅವರು, ಜೈಲಿನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಮುಂದಿನ ರಾಜಕೀಯ ನಡೆಗಳ ಕುರಿತು ಚರ್ಚಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರ ಜತೆಗಿನ ಭೇಟಿಯನ್ನು ಆಂಧ್ರ ಪ್ರದೇಶದಲ್ಲಿನ ಮಹತ್ವದ ಬೆಳಣಿಗೆ ಎಂದು ಬಣ್ಣಿಸಿದ್ದಾರೆ.

ಚಂದ್ರಬಾಬು ನಾಯ್ಡು ಬಂಧನ ಮತ್ತು ಹಿನ್ನಲೆ ಏನು?

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಾರ್ಟಿ (TDP) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಶನಿವಾರ (ಸೆಪ್ಟೆಂಬರ್‌ 9) ಬಂಧಿಸಲಾಗಿದೆ. ಕೌಶಲಾಭಿವೃದ್ಧಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಯಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಬೆಳಗಿನ ಜಾವ 6 ಗಂಟೆಗೆ ನಂದ್ಯಾಲದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚಂದ್ರಬಾಬು ನಾಯ್ಡು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಂದ್ಯಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಅವರನ್ನು ವಿಜಯವಾಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕೆಲ ದಿನಗಳಿಂದ ಚಂದ್ರಬಾಬು ನಾಯ್ಡು ಅವರಿಗೆ ಬಂಧನದ ಭೀತಿ ಎದುರಾಗಿತ್ತು. ಇದನ್ನು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ನನ್ನ ಮೇಲೆ ದಾಳಿ ನಡೆಯುತ್ತದೆ, ನನ್ನನ್ನು ಬಂಧಿಸಲಾಗುತ್ತದೆ ಎಂದು ಅವರು ಹೇಳಿಕೊಂಡೇ ತಿರುಗಾಡುತ್ತಿದ್ದರು. ಈಗ ಕೊನೆಗೂ ಸಿಐಡಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: NTR Statue: ಬಳ್ಳಾರಿಯಲ್ಲಿ ಎನ್.ಟಿ.ಆರ್‌ ಪ್ರತಿಮೆ ಅನಾವರಣಗೊಳಿಸಿದ ಚಂದ್ರಬಾಬು ನಾಯ್ಡು

ಏನಿದು ಪ್ರಕರಣ?

ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶ ರಾಜ್ಯ ಕೌಶಲಾಭಿವೃದ್ಧಿ ನಿಗಮದಲ್ಲಿ (APSSDC) ಸುಮಾರು 3,300 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ತಿಳಿದುಬಂದಿದೆ. ನಿರುದ್ಯೋಗಿ ಯುವಕರು ಹಾಗೂ ಯುವತಿಯರ ಕೌಶಲಾಭಿವೃದ್ಧಿಗೊಳಿಸುವ ದಿಸೆಯಲ್ಲಿ 2016ರಲ್ಲಿ ನಿಗಮ ಸ್ಥಾಪಿಸಲಾಗಿದ್ದು, ಯೋಜನೆ ಜಾರಿಯಲ್ಲಿ ಭಾರಿ ಹಗರಣ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದ್ದು, ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version