Site icon Vistara News

Jansmapark Abhiyan | ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಗೆಲ್ಲುವ ಪಟ್ಟು! 2024ರ ಚುನಾವಣೆ ತಯಾರಿಯ ಬ್ಲೂಪ್ರಿಂಟ್‌

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರವಿದ್ದರೂ ಲೋಕಸಭೆ ವಿಚಾರಕ್ಕೆ ಬಂದರೆ ಬಿಜೆಪಿ ಒಳ್ಳೆಯ ಹಿಡಿತವನ್ನೇ ಸಾಧಿಸಿದೆ. ಇರುವ 42 ಕ್ಷೇತ್ರಗಳ ಪೈಕಿ 2014ರಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ 2019ಕ್ಕಾಗಲೇ ಅದನ್ನು 18 ಸ್ಥಾನಕ್ಕೆ ಹೆಚ್ಚಿಸಿಕೊಂಡಿತ್ತು. ಮಮತಾ ಅವರ ಟಿಎಂಸಿ ಪಕ್ಷ 22 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಆದರೆ ಈ ಬಾರಿ ಮಮತಾ ಅವರ ಪಕ್ಷವನ್ನೂ ಸೋಲಿಸಿ ಹೆಚ್ಚು ಸ್ಥಾನವನ್ನು ತಾವೇ ಪಡೆಯಬೇಕೆಂಬ ಪಣವನ್ನು ಬಿಜೆಪಿ ತೊಟ್ಟಿದೆ. ಅದೇ ಹಿನ್ನೆಲೆ ಚುನಾವಣೆ ಒಂದು ವರ್ಷಕ್ಕೂ ಅಧಿಕ ಸಮಯಾವಕಾಶ ಇರುವಾಗಲೇ ಪ್ರಚಾರಕ್ಕೆ (Jansmapark Abhiyan) ಮುಂದಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್​ ರೈಲಿಗೆ ಚಾಲನೆ ವೇಳೆ ಜೈ ಶ್ರೀರಾಮ್​ ಘೋಷಣೆ; ವೇದಿಕೆ ಏರದೆ ಮೌನವಾಗಿ ಕುಳಿತ ಮಮತಾ ಬ್ಯಾನರ್ಜಿ

ಸದ್ಯದಲ್ಲೇ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ʼಜನಸಂಪರ್ಕ ಅಭಿಯಾನʼಕ್ಕೆ ಚಾಲನೆ ನೀಡಲಿದೆ. ಈ ಅಭಿಯಾನದ ಮೂಲಕ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯದ ಪ್ರತಿ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ಕೇಳಿ ಪಡೆಯಲಿದ್ದಾರೆ.

ಅದಲ್ಲದೆ ಮಾರ್ಚ್‌-ಏಪ್ರಿಲ್‌ ವೇಳೆಗೆ ಮತ್ತೊಂದು ಅಭಿಯಾನವನ್ನು ನಡೆಸಿ, ಜನರನ್ನು ಸೆಳೆಯುವ ಯೋಜನೆ ಬಿಜೆಪಿಗಿದೆ. ಎಲ್ಲ ಜಿಲ್ಲೆಗಳ ಬೂತ್‌ ಮಟ್ಟಗಳಲ್ಲಿ ಬಿಜೆಪಿಯ ಪ್ರತಿನಿಧಿಗಳನ್ನು ಬದಲಿಸುವ ಚಿಂತನೆಯಿದೆ. ಮಂಡಲ್‌ ಮತ್ತು ಬೂತ್‌ ಮಟ್ಟದಲ್ಲಿರುವ ಸಮಿತಿಗಳ ಸದಸ್ಯರನ್ನು ಬದಲಿಸಿ ಹೊಸ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ. ಹೆಚ್ಚು ಮತ ಸಿಗದ ಕ್ಷೇತ್ರಗಳಿಗೆ ವಿಶೇಷ ಮನ್ನಣೆ ನೀಡಿ, ಕೆಲಸ ಮಾಡಲಾಗುವುದು ಎಂದು ತಿಳಿಸಲಾಗಿದೆ. ಜ.21ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದು, ಅದರಲ್ಲಿ ಪ್ರಚಾರದ ಬಗ್ಗೆ ಇನ್ನಷ್ಟು ಚರ್ಚೆಗಳು ಹಾಗೂ ತೀರ್ಮಾನಗಳಾಗಲಿವೆ.

ಇದನ್ನೂ ಓದಿ: Prajadhwani Yatre | ಬಿಜೆಪಿಯವರು ಕಂಸ, ದುರ್ಯೋಧನಗಿಂತ ನಿರ್ದಯಿಗಳು: ರಣದೀಪ್‌ ಸಿಂಗ್‌ ಸುರ್ಜೆವಾಲ ವಾಗ್ದಾಳಿ

ಹಲವಾರು ಕೇಂದ್ರ ಸಚಿವರಿಗೂ ಈ ರಾಜ್ಯದಲ್ಲಿ ಪ್ರಚಾರದ ಉಸ್ತುವಾರಿ ನೀಡಲಾಗಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಸ್ಮೃತಿ ಇರಾನಿ, ಪಂಕಜ್‌ ಚೌಧರಿ ಸೇರಿ ಅನೇಕರು ತಲಾ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು, ಅಲ್ಲಿನ ವರದಿ ಪಡೆದು, ಸಭೆಗಳನ್ನು ನಡೆಸಲು ಸೂಚಿಸಲಾಗಿದೆ. ಅದರಲ್ಲಿ ಮೊದಲನೇ ಹಂತದ ಭೇಟಿ ಈಗಾಗಲೇ ನಡೆದಿದ್ದು, ಚುನಾವಣೆಯವರೆಗೂ ಹಂತ ಹಂತವಾಗಿ ಭೇಟಿ ಕಾರ್ಯಕ್ರಮವಿರಲಿದೆ ಎಂದು ಮೂಲಗಳು ಹೇಳಿವೆ.

ಅದಷ್ಟೇ ಅಲ್ಲದೆ ಬಿಜೆಪಿಯ ಚಾಣಕ್ಯ ಎಂದೇ ಕರೆಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪಶ್ಚಿಮ ಬಂಗಾಳಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ.

Exit mobile version