ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ (Lok Sabha) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ದೇಶದ ಅಭಿವೃದ್ಧಿ, ವಿಕಸಿತ ಭಾರತದ ಕಲ್ಪನೆಯ ಜತೆಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. “ದೇಶದ ಮಹಾನ್ ವ್ಯಕ್ತಿಗಳಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಅದರಲ್ಲೂ, ಸ್ವಾತಂತ್ರ್ಯದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜವಾಹರ ಲಾಲ್ ನೆಹರು (Jawaharlal Nehru) ಅವರು ಷಡ್ಯಂತ್ರದಿಂದ ಸೋಲಿಸಿದರು” ಎಂದು ದೂರಿದರು.
“ದೇಶದ ಮಹಾನ್ ವ್ಯಕ್ತಿಗಳಿಗೆ, ಗಣ್ಯರಿಗೆ, ಧೀಮಂತ ನಾಯಕರಿಗೆ ಕಾಂಗ್ರೆಸ್ ಅವಮಾನ, ಮೋಸ ಮಾಡಿದೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಷಡ್ಯಂತ್ರದಿಂದ ಸೋಲಿಸಿತು. ಅಷ್ಟೇ ಅಲ್ಲ, ಜಗಜೀವನ್ ರಾಮ್ ಅವರು ಪ್ರಧಾನಿಯಾಗುವುದನ್ನು ಇಂದಿರಾ ಗಾಂಧಿ ಅವರು ತಪ್ಪಿಸಿದರು. ಜಗಜೀವನ್ ರಾಮ್ ಅವರು ಪ್ರಧಾನಿಯಾಗಬಾರದು ಎಂಬುದಾಗಿ ಇಂದಿರಾ ಗಾಂಧಿ ಅವರು ಬರೆದ ಪತ್ರದ ಬಗ್ಗೆ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ” ಎಂದು ಮೋದಿ ತಿಳಿಸಿದರು.
“ಕಾಂಗ್ರೆಸ್ ಎಂದಿಗೂ ರಾಜಕೀಯ ಸ್ವಾರ್ಥಕ್ಕಾಗಿ ಷಡ್ಯಂತ್ರ, ಕೀಳು ರಾಜಕೀಯ ಮಾಡಿದೆ. ಇದೇ ಕಾರಣದಿಂದಾಗಿ ಸೀತಾರಾಮ್ ಕೇಸರಿ ಅವರಿಗೆ ಕಾಂಗ್ರೆಸ್ ಮೋಸ ಮಾಡಿತು. ಇತಿಹಾಸದುದ್ದಕ್ಕೂ ಕಾಂಗ್ರೆಸ್ ತನ್ನ ಲಾಭಕ್ಕೋಸ್ಕರ ಕೆಲಸ ಮಾಡಿತೇ ಹೊರತು, ದೇಶದ ಏಳಿಗೆಗೆ ದುಡಿಯಲಿಲ್ಲ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಸೈನಿಕರ ಬಗ್ಗೆಯೂ ಅನುಮಾನದಿಂದ ಮಾತನಾಡುವ ಮೂಲಕ ಯೋಧರಿಗೆ ಅವಮಾನ ಮಾಡಿದೆ” ಎಂದು ಟೀಕಿಸಿದರು.
“ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ” ಎಂದು ಮೋದಿ ಗುಡುಗಿದರು.
ನೂತನ ಸಂಸದರಿಗೆ ಅಭಿನಂದನೆ
ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.
ಇದನ್ನೂ ಓದಿ: Narendra Modi: ರಾಹುಲ್ ಗಾಂಧಿಯನ್ನು ‘ಬಾಲ ಬುದ್ಧಿಯವನು’ ಎಂದ ಮೋದಿ; ಅವರು ಹೇಳಿದ ‘ಸೈಕಲ್ ಕತೆ’ಯೂ ಇಲ್ಲಿದೆ!