Site icon Vistara News

Viral Video: ರಾಜ್ಯಸಭೆಯಲ್ಲಿ ಜಯಾ ಬಚ್ಚನ್​ ಕ್ರೋಧದ ವರ್ತನೆ; ಅಧ್ಯಕ್ಷರತ್ತ ಕೈಬೆರಳು ತೋರಿಸಿ ನಡೆದ ಸಂಸದೆ!

Jaya Bachchan Gets Angry In Rajya Sabha

#image_title

ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ (Jaya Bachchan)​ ಅವರು ರಾಜ್ಯಸಭೆಯಲ್ಲಿ ಅತ್ಯಂತ ಕ್ರೋಧದಿಂದ ವರ್ತಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯಸಭೆ ಅಧ್ಯಕ್ಷ ಜಗದೀಪ್​ ಧನಕರ್​ ಅವರತ್ತ ಕೈ ಬೆರಳು ತೋರಿಸಿ, ಕೋಪದಿಂದ ಇನ್ನೇನೋ ಹೇಳುತ್ತ ಅವರು ಹೋಗಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಬಿಜೆಪಿ ನಾಯಕರು ಈ ವಿಡಿಯೊವನ್ನು ಶೇರ್​ ಮಾಡಿಕೊಂಡು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸಭೆಯಲ್ಲಿ ಹೀಗೆ ಅವರು ದಾರ್ಷ್ಟ್ಯದಿಂದ ವರ್ತಿಸಿದ್ದು ಸರಿಯಿಲ್ಲ ಎಂದು ಬಿಜೆಪಿ ನಾಯಕ ಅಜಯ್ ಸೆಹ್ರಾವತ್ ಹೇಳಿದ್ದಾರೆ. ಆದರೆ ನೆಟ್ಟಿಗರು ಈ ವಿಡಿಯೊ ನೋಡಿ, ಇದರಲ್ಲೇನೂ ವಿಶೇಷವಿಲ್ಲ, ‘ಜಯಾ ಬಚ್ಚನ್​ ಅವರು ಸಾಮಾನ್ಯವಾಗಿ ಫೋಟೋ ಜರ್ನಲಿಸ್ಟ್​​ಗಳನ್ನು ಯಾವಾಗ ನೋಡಿದರೂ ಹೀಗೇ ಆಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೋಟೋ ತೆಗೆಯಲು ಬರುವವರತ್ತ ಅವರದ್ದು ಇದೇ ವರ್ತನೆ ಇರುತ್ತದೆ’ ಎಂದಿದ್ದಾರೆ.

ಅಂದಹಾಗೇ, ಇದು ಫೆ.9ರಂದು ರಾಜ್ಯಸಭೆಯಲ್ಲಿ ಸೃಷ್ಟಿಯಾಗಿದ್ದ ಸನ್ನಿವೇಶ. ಸಂಸತ್ತಿನಲ್ಲಿ ಅದಾನಿ ಹಗರಣ ಇಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದವು. ಇದೇ ವೇಳೆ ರಾಜ್ಯಸಭೆ ಅಧ್ಯಕ್ಷರ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್​ ಸಂಸದೆ ರಜನಿ ಪಾಟೀಲ್​ ಅವರನ್ನು ಬಜೆಟ್ ಅಧಿವೇಶನದಿಂದಲೇ ಅಮಾನತು ಮಾಡಲಾಯಿತು. ಆಗ ಅವರ ಬೆಂಬಲಕ್ಕೆ ನಿಂತ ಜಯಾ ಬಚ್ಚನ್​, ‘ಕಾಂಗ್ರೆಸ್​ ಸಂಸದೆಗೆ ಸಮರ್ಥನೆ ನೀಡಲೂ ಅವಕಾಶ ಕೊಡಲಿಲ್ಲ. ಅತ್ಯಂತ ಅವಮಾನಕರವಾಗಿ ಅವರನ್ನು ಅಮಾನತು ಮಾಡಲಾಗಿದೆ. ಇಂಥದ್ದು ರಾಜ್ಯಸಭೆಯಲ್ಲಿ ಆಗಬಾರದು. ಹಾಗೊಮ್ಮೆ, ಯಾವುದೇ ಸಂಸದರು ತಪ್ಪು ಮಾಡಿದ್ದಾರೆ ಎನ್ನಿಸಿದರೆ, ಆ ಬಗ್ಗೆ ತನಿಖೆ ನಡೆಸಲು ಸಮಿತಿಗೆ ವಹಿಸಬೇಕು. ಅದ್ಯಾವುದನ್ನೂ ಮಾಡದೆ, ಸಂಸದೆಗೆ ಒಂದು ಅವಕಾಶವನ್ನೂ ಕೊಡದೆ ಹೀಗೆ ಅಮಾನತು ಮಾಡಿದ್ದು ಸರಿಯಲ್ಲ’ ಎಂದು ಕೂಗಾಡಿದರು. ತಮ್ಮ ಸ್ಥಳದಿಂದ ಅತ್ತ ನಡೆದು, ಅಧ್ಯಕ್ಷ ಜಗದೀಪ್​ ಧನಕರ್​ ಅವರತ್ತ ಕೈಬೆರಳು ತೋರಿಸಿದರು. ಅಲ್ಲಿ ಉಳಿದ ಸಂಸದರ ಗದ್ದಲವೂ ಜೋರಾಗಿತ್ತು. ಆಗ ಜಗದೀಪ್​ ಧನಕರ್​ ಅವರು ಎದ್ದು ನಿಂತು, ಎಲ್ಲರೂ ಸುಮ್ಮನೆ ಕುಳಿತುಕೊಳ್ಳಿ ಎಂದು ಕೈಸನ್ನೆ ಮೂಲಕವೇ ಹೇಳಿದರು.

Exit mobile version