Site icon Vistara News

ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್; ಮೈತ್ರಿ ಬಿಟ್ಟು ಬಿಜೆಪಿ ಜತೆ ಸೇರಿದ ಆರ್‌ಎಲ್‌ಡಿ!

Jayant Chaudhary

Bharat Ratna For Chaudhary Charan Singh: RLD's Jayant Chaudhary Confirms Alliance With BJP

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ (India Bloc) ರಾಷ್ಟ್ರೀಯ ಲೋಕದಳ (RLD) ಮುಖ್ಯಸ್ಥ ಜಯಂತ್‌ ಚೌಧರಿ (Jayant Chaudhary) ಶಾಕ್‌ ನೀಡಿದ್ದಾರೆ. ಜಯಂತ್‌ ಚೌಧರಿ ಅವರು ಇಂಡಿಯಾ ಒಕ್ಕೂಟವನ್ನು ತೊರೆದು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಸೀಟು ಹಂಚಿಕೆ ಒಪ್ಪಂದದಂತೆ ಜಯಂತ್‌ ಚೌಧರಿ ಅವರ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಉತ್ತರ ಪ್ರದೇಶದ ಬಾಗ್ಪತ್‌ ಹಾಗೂ ಬಿಜ್ನೋರ್‌ನಲ್ಲಿ ಆರ್‌ಎಲ್‌ಡಿ ಸ್ಪರ್ಧಿಸಲಿದೆ. ಹಾಗೆಯೇ, ಪಕ್ಷದ ನಾಯಕರೊಬ್ಬರಿಗೆ ರಾಜ್ಯಸಭೆ ಸೀಟು ಕೊಡುವುದಾಗಿಯೂ ಬಿಜೆಪಿ ಭರವಸೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಭಾರಿ ಹಿನ್ನಡೆಯಾದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಆರ್‌ಎಲ್‌ಡಿ ಮಧ್ಯೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿತ್ತು. ಮೂಲಗಳ ಪ್ರಕಾರ, ಆರ್‌ಎಲ್‌ಡಿಗೆ ಲೋಕಸಭೆಯ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಆದರೆ, ಈಗ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟ ತೊರೆದಿದೆ. ಇನ್ನೂ 2-3 ದಿನದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕುರಿತು ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸುವ ಮುನ್ನವೇ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಿರುವುದು ಕೂಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಫೆಬ್ರವರಿ 14ರಂದು ಭಾರತ್‌ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Nitish Kumar: ನಿತೀಶ್‌ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?

ಇಂಡಿಯಾ ಒಕ್ಕೂಟಕ್ಕೆ ಸಾಲು ಸಾಲು ಹಿನ್ನಡೆ

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಅದರಲ್ಲೂ, ನಿತೀಶ್‌ ಕುಮಾರ್‌ ಅವರ ವಿದಾಯವು ಇಂಡಿಯಾ ಒಕ್ಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version