ನವದೆಹಲಿ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿದ್ದು, ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಇದಕ್ಕೂ ಮೊದಲು ಎನ್‌ಡಿಎ ಪಕ್ಷಗಳ ಸಭೆ ನಡೆದಿದ್ದು, ನರೇಂದ್ರ ಮೋದಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಣೆ ಮಾಡಲಾಯಿತು. ಇನ್ನು ಸಭೆಯ ವೇಳೆ, ನಿತೀಶ್ ಕುಮಾರ್ ಅವರು ಆಡಿದ ಮಾತಿಗೆ ನರೇಂದ್ರ ಮೋದಿ ಅವರು ಗಹಗಹಿಸಿ ನಕ್ಕಿದ್ದಾರೆ.
“ಮುಂದಿನ ಸಲವೂ ನೀವೇ ಸ್ಪರ್ಧೆಗೆ ನಿಂತರೆ, ಈಗ ಅಲ್ಲಲ್ಲಿ ಗೆಲುವು ಸಾಧಿಸಿರುವ ಇಂಡಿಯಾ ಒಕ್ಕೂಟದ ಯಾವೊಬ್ಬರೂ ಗೆಲ್ಲುವುದಿಲ್ಲ. ಎಲ್ಲರೂ ನಿಮ್ಮೆದುರು ಸೋತು ಹೋಗುತ್ತಾರೆ. ಅವರು ಎಂದಿಗೂ ದೇಶಕ್ಕಾಗಿ ಕೆಲಸ ಮಾಡಿಲ್ಲ. ಅವರಿಂದ ದೇಶಕ್ಕೆ ಯಾವ ಸೇವೆಯೂ ಸಿಕ್ಕಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ದೇಶ ಏಳಿಗೆ ಹೊಂದುತ್ತಿದೆ” ಎಂಬುದಾಗಿ ನಿತೀಶ್ ಕುಮಾರ್ ಹೇಳಿದರು. ಆಗ ನರೇಂದ್ರ ಮೋದಿ ಅವರು ಗಹಗಹಿಸಿ ನಕ್ಕರು. ಸಭೆಯಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು.
#WATCH | At the NDA Parliamentary Party meeting, Bihar CM- JD(U) chief Nitish Kumar says "…'Agli baar jab aap aaiye toh kuch log jo idhar udhar jeet gaya hai, agli baar sab haarega. Humko poora bharosa hai'…" pic.twitter.com/WtZT3KrOGM
— ANI (@ANI) June 7, 2024
ಮೋದಿಯ ಪಾದ ಮುಟ್ಟಿ, ನಮಸ್ಕರಿಸಲು ಮುಂದಾದ ನಿತೀಶ್
ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್ ಕುಮಾರ್ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.
ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್, ಪವನ್ ಕಲ್ಯಾಣ್ ಸೇರಿ ಹಲವರನ್ನು ಹೊಗಳಿದರು. ಯೋಗಿ ಆದಿತ್ಯನಾಥ್ ಅವರ ಬೆನ್ನನ್ನೂ ತಟ್ಟಿದರು. ಇದೇ ವೇಳೆ, ದಕ್ಷಿಣ ಭಾರತದ ಫಲಿತಾಂಶದ ಕುರಿತು ಕೂಡ ಮೋದಿ ಪ್ರಸ್ತಾಪಿಸಿದರು.
“ದಕ್ಷಿಣ ಭಾರತದಲ್ಲಿ ಎನ್‌ಡಿಎ ಬುನಾದಿ ಭದ್ರವಾಗಿದ್ದು, ಹೊಸ ರಾಜಕೀಯಕ್ಕೆ ಇದು ನಾಂದಿಯಾಗಿದೆ. ಕರ್ನಾಟಕ ಹಾಗೂ ತೆಲಂಗಾಣವನ್ನೇ ತೆಗೆದುಕೊಳ್ಳಿ, ಇತ್ತೀಚೆಗೆ ಬೇರೆ ಪಕ್ಷಗಳ ಸರ್ಕಾರಗಳು ಅಲ್ಲಿ ಆಡಳಿತಕ್ಕೆ ಬಂದಿವೆ. ಆದರೆ, ಜನರು ಭ್ರಮೆಯಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನ ಎನ್‌ಡಿಎ ಮೈತ್ರಿಕೂಟವನ್ನು ಸ್ವೀಕರಿಸಿದ್ದಾರೆ. ಇದು ಎನ್‌ಡಿಎ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: Narendra Modi: ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ; ಈಗ ಹಂಗಾಮಿ ಪ್ರಧಾನಿ!