Site icon Vistara News

ಬಿ.ಎಲ್.ಸಂತೋಷ್‌ ಉಪಸ್ಥಿತಿಯಲ್ಲಿ ದಾದ್ರಾ, ನಗರ ಹವೇಲಿ ಜೆಡಿಯು ಬಿಜೆಪಿ ಜತೆ ವಿಲೀನ, ನಿತೀಶ್‌ ಕುಮಾರ್‌ಗೆ ಸಡ್ಡು

BJP

ದಮನ್:‌ ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿ ಬಿಜೆಪಿಗೆ ತಿರುಗೇಟು ನೀಡಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಕಮಲ ಪಡೆ ಸಡ್ಡು ಹೊಡೆದಿದೆ. ಮಣಿಪುರ ಜೆಡಿಯು ಶಾಸಕರ ಬಣವು ಬಿಜೆಪಿ ಜತೆ ವಿಲೀನವಾದ ಬೆನ್ನಲ್ಲೇ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್‌ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಲ್ಲೂ ಜೆಡಿಯು ಬಿಜೆಪಿ ಜತೆ ವಿಲೀನವಾಗಿದೆ. ಇದರಿಂದ ಜೆಡಿಯುಗೆ ಭಾರಿ ಹಿನ್ನಡೆಯುಂಟಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇತೃತ್ವದಲ್ಲಿ ಕೇಂದ್ರಾಡಳಿತ ಪ್ರದೇಶದ ಜೆಡಿಯು ಘಟಕವು ಬಿಜೆಪಿ ಜತೆ ವಿಲೀನವಾಗಿದೆ. ಪ್ರಮುಖ ನಾಯಕರು ಸಹ ಕಮಲ ಪಾಳಯ ಸೇರಿದ್ದಾರೆ. ಸೆಪ್ಟೆಂಬರ್‌ ೪ರಂದು ಮಣಿಪುರದಲ್ಲೂ ಇದೇ ರೀತಿ ಜೆಡಿಯು ಬಣವು ಬಿಜೆಪಿ ಜತೆ ವಿಲೀನಗೊಂಡಿತ್ತು.

ಬಿಹಾರದಲ್ಲಿ ಬಿಜೆಪಿಯು ಜೆಡಿಯು ಪಕ್ಷವನ್ನು ದುರ್ಬಲಗೊಳಿಸುತ್ತದೆ, ಇಬ್ಭಾಗ ಮಾಡುತ್ತದೆ ಎಂಬ ಭೀತಿಯಿಂದಾಗಿ ನಿತೀಶ್‌ ಕುಮಾರ್‌ ಅವರು ಇತ್ತೀಚೆಗೆ ಮೈತ್ರಿ ಮುರಿದುಕೊಂಡಿದ್ದರು. ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸುವ ಮೂಲಕ ಕಮಲ ಪಾಳಯಕ್ಕೆ ಟಾಂಗ್‌ ನೀಡಿದ್ದರು. ಆದರೆ, ಬೇರೆ ರಾಜ್ಯಗಳಲ್ಲಿ ಜೆಡಿಯು ಘಟಕಗಳನ್ನು ಬಿಜೆಪಿಯು ವಿಲೀನ ಮಾಡಿಕೊಳ್ಳುವ ಮೂಲಕ ತಿರುಗೇಟು ನೀಡುತ್ತಿದೆ.

ಇದನ್ನೂ ಓದಿ | Nitish Kumar | ಮಣಿಪುರದಲ್ಲಿ ಬಿಜೆಪಿ ಜತೆ ಜೆಡಿಯು ವಿಲೀನ, ನಿತೀಶ್‌ ಕುಮಾರ್‌ಗೆ ಭಾರಿ ಹಿನ್ನಡೆ

Exit mobile version