ಜೈಪುರ: ಮನುಷ್ಯನಾಗಿ ಹುಟ್ಟಿದ ಮೇಲೆ ಒಂದೋ ಡಾಕ್ಟರ್ ಆಗಬೇಕು, ಇಲ್ಲವೇ ಎಂಜಿನಿಯರ್ ಆಗಬೇಕು. ಅದಕ್ಕಾಗಿ, ಎಲ್ಲ ಪರೀಕ್ಷೆಗಳಲ್ಲೂ 100ಕ್ಕೆ 100 ಅಂಕ ತೆಗೆದುಕೊಳ್ಳಬೇಕು. ರ‍್ಯಾಂಕ್ (Rank) ತೆಗೆದುಕೊಳ್ಳಬೇಕು. ಅದಕ್ಕಾಗಿ, ಹಗಲು ರಾತ್ರಿ ಓದಬೇಕು… ಪೋಷಕರು ಹಾಗೂ ಶಿಕ್ಷಕರು ಇಂತಹ ಅಂಕ ಬೇಟೆಯ ಒತ್ತಡದಿಂದಾಗಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಖಿನ್ನತೆಗೊಳಗಾಗುತ್ತಿದ್ದಾರೆ. ಅದರಲ್ಲೂ, ರಾಜಸ್ಥಾನದ (Rajasthan) ಕೋಟಾದಲ್ಲಿರುವ ಕೋಚಿಂಗ್ ಸೆಂಟರ್‌ಗಳಲ್ಲಂತೂ (Coaching Centres) ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಇದರ ಮಧ್ಯೆಯೇ, ಕೋಟಾದ ಕೋಚಿಂಗ್ ಸೆಂಟರ್‌ನಲ್ಲಿ ಕಾಟ ತಾಳಲಾರದೆ 5 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬ ಈಗ ಸಿಕ್ಕಿದ್ದಾನೆ.
ಹೌದು, ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ ಕೋಟಾ ಕೋಚಿಂಗ್ ಸೆಂಟರ್‌ನಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ. ಆದರೆ, ಅಂಕ ಸಾಧನೆ, ರ‍್ಯಾಂಕ್, ಶಿಕ್ಷಕರ ಒತ್ತಡ ಸಹಿಸದ ಆತನು 2023ರ ಅಕ್ಟೋಬರ್‌ನಲ್ಲಿ ಕಾಣೆಯಾಗಿದ್ದ. ಬಿಹಾರ ಮೂಲದ 17 ವರ್ಷದ ವಿದ್ಯಾರ್ಥಿಯು ಹಾಸ್ಟೆಲ್ ಕೋಣೆಯಿಂದಲೇ ಕಾಣೆಯಾಗಿದ್ದ. ಕೊನೆಗೆ, ಪೊಲೀಸರು ಈತನನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಶಿವಗಿರಿ ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಇದಾದ ಬಳಿಕ ಆತನನ್ನು ಪೋಷಕರ ಸುಪರ್ದಿಗೆ ನೀಡಿದ್ದಾರೆ.
“ಕೋಟಾದ ವಿಜ್ಞಾನ ನಗರ ಪ್ರದೇಶದಲ್ಲಿರುವ ಕೋಚಿಂಗೊ ಸೆಂಟರ್‌ನಲ್ಲಿ ವಿದ್ಯಾರ್ಥಿಯು ಜಂಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಬಿಹಾರದ ರಘೋಪುರ-ಸುಪೌಲ್‌ನವನಾದ ವಿದ್ಯಾರ್ಥಿಯು ಅಕ್ಟೋಬರ್ 5ರಂದು ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ. ನವೆಂಬರ್ 9ರಂದು ಬಾಲಕನ ತಂದೆಯು ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ಕೇರಳದಲ್ಲಿ ಪತ್ತೆಹಚ್ಚಿದ್ದಾರೆ” ಎಂದು ಕೋಟಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Self Harming: ಪಪ್ಪಾ… ನಾನು ಲೂಸರ್, ಕೆಟ್ಟ ಮಗಳು! ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ
ಜೆಇಇ, ಜಾಬ್ ಇವನ ಆಸಕ್ತಿ ಆಗಿರಲಿಲ್ಲ
ಪಿಯುಸಿ ಬಳಿಕ ಜೆಇಇ ತೇರ್ಗಡೆ ಹೊಂದಿ, ಕೈತುಂಬ ಸಂಬಳ ಬರುವ ಉದ್ಯೋಗಕ್ಕಿಂತ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ವಿದ್ಯಾರ್ಥಿಗೆ ಹೆಚ್ಚಿನ ಆಸಕ್ತಿ ಇತ್ತು. ಆದರೆ, ತಂದೆ-ತಾಯಿಯ ಕನಸು ಈಡೇರಿಸಲು ಆತನು ಕೋಟಾ ಕೋಚಿಂಗ್ ಸೆಂಟರ್‌ಗೆ ಬಂದಿದ್ದ. ಕೋಚಿಂಗ್ ಸೆಂಟರ್‌ನಲ್ಲೂ ಓದು, ಅಂಕ, ರ‍್ಯಾಂಕ್ ಎಂಬ ಚರ್ಚೆ, ಮಾತು, ಒತ್ತಡ ತಾಳದೆ ಆತನು ಕೇರಳಕ್ಕೆ ಹೋಗಿದ್ದ. ಕೇರಳದಲ್ಲಿರುವ ಸಮುದ್ರಗಳು ಆತನನ್ನು ಹೆಚ್ಚು ಆಕರ್ಷಿಸಿದ್ದವು. ಇದೆಲ್ಲವನ್ನು ವಿದ್ಯಾರ್ಥಿಯೇ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ