ನವದೆಹಲಿ: ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (Joint Entrance Exam) ಸೆಷನ್ 2 ಫಲಿತಾಂಶವು (JEE Main 2024) ಏಪ್ರಿಲ್ 25ರಂದು ಪ್ರಕಟವಾಗಲಿದೆ. ಈ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮಾಹಿತಿ ನೀಡಿದೆ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲ ಹೆಚ್ಚಾಗಿದೆ. ಏಪ್ರಿಲ್ 25ರಂದು ಜೆಇಇ ಮುಖ್ಯ ಪರೀಕ್ಷೆ (ಸೆಷನ್ 2) ಫಲಿತಾಂಶ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ಏಪ್ರಿಲ್ 12ರಂದು ಕೀ ಆನ್ಸರ್‌ಗಳನ್ನು ಎನ್‌ಟಿಎ ಪ್ರಕಟಿಸಿದೆ. ಇದಕ್ಕೂ ಮೊದಲು ಪ್ರಾವಿಷನಲ್ ಆನ್ಸರ್ ಶೀಟ್‌ಗಳನ್ನು ಕೂಡ ಪ್ರಕಟಿಸಲಾಗಿದೆ. ಜೆಇಇ ಮುಖ್ಯ ಪರೀಕ್ಷೆಯ ಸೆಷನ್ 2 ಫಲಿತಾಂಶಕ್ಕೂ ಮುನ್ನ ಅಂತಿಮ ಆನ್ಸರ್ ಶೀಟ್‌ಗಳನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ. ಸ್ಕೋರ್‌ಕಾರ್ಡ್ ಬಿಡುಗಡೆಯ ನಂತರ ಜೆಇಇ ಮುಖ್ಯ ಪರೀಕ್ಷೆಯ ಆಲ್ ಇಂಡಿಯಾ ರ‍್ಯಾಂಕ್‌ಗಳನ್ನು ಎನ್‌ಟಿಎ ಪ್ರಕಟಿಸಲಿದೆ. ಪರೀಕ್ಷೆಯ ಫಲಿತಾಂಶವನ್ನು ಎನ್‌ಟಿಎ ವೆಬ್‌ಸೈಟ್ ಆದ jeemain.nta.ac.in. ಗೆ ಭೇಟಿ ನೀಡಿ ತಿಳಿಯಬಹುದಾಗಿದೆ.
ಜೆಇಇ ಮುಖ್ಯ ಪರೀಕ್ಷೆಯನ್ನು (ಸೆಷನ್ 2) ಎನ್‌ಟಿಎ ಏಪ್ರಿಲ್ 4, 5, 6, 8, 9 ಹಾಗೂ 12ರಂದು ನಡೆಸಿದೆ. ವಿದೇಶಗಳ 22 ನಗರಗಳು ಹಾಗೂ ಭಾರತದ 319 ನಗರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎನ್‌ಟಿಎಯು ಜನವರಿ ಹಾಗೂ ಏಪ್ರಿಲ್‌ನಲ್ಲಿ ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಸಿದೆ. ಎರಡೂ ಸೆಷನ್‌ಗಳಿಗೆ ಸುಮಾರು 24 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಎರಡೂ ಸೆಷನ್‌ಗಳಲ್ಲಿ ತೆಗೆದುಕೊಂಡ ಅಂಕಗಳನ್ನು ಆಧರಿಸಿ ಎನ್‌ಟಿಎ ಅಖಿಲ ಭಾರತ ಮಟ್ಟದಲ್ಲಿ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಫಲಿತಾಂಶ ತಿಳಿಯುವುದು ಹೇಗೆ?
- ಎನ್‌ಟಿಎ ವೆಬ್‌ಸೈಟ್ ಆದ jeemain.nta.ac.in. ಗೆ ಭೇಟಿ ನೀಡಿ
- JEE Mains 2024 Session 2 results ಮೇಲೆ ಕ್ಲಿಕ್ ಮಾಡಿ, ಸ್ಕೋರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ
- ಅಪ್ಲಿಕೇಷನ್ ನಂಬರ್, ಜನ್ಮದಿನಾಂಕ ಸೇರಿ ಅಗತ್ಯ ಮಾಹಿತಿ ಒದಗಿಸಿ
- ಇದಾದ ನಂತರ ಸಬ್ಮಿಟ್ ಮಾಡಿ, ಆಗ ಸ್ಕ್ರೀನ್ ಮೇಲೆ ಫಲಿತಾಂಶ ಕಾಣುತ್ತದೆ
- ಮುಂದಿನ ರೆಫರೆನ್ಸ್ಗಳಿಗಾಗಿ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ
ಇದನ್ನೂ ಓದಿ: Viral News: ಅಮ್ಮಾ ನಾ ಫೇಲಾದೆ; 27 ಸಲ ಜೆಇಇ ಬರೆದರೂ ಪಾಸಾಗದ ಕೋಟ್ಯಧೀಶ ಉದ್ಯಮಿ!