ರಾಂಚಿ: ಜಾರ್ಖಂಡ್ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಯಾವ ಹೊತ್ತಲ್ಲಿ ಬೇಕಾದರೂ ಸ್ಥಾನ ಕಳೆದುಕೊಳ್ಳಬಹುದು. ಶಾಸಕನ ಸ್ಥಾನದಿಂದಲೇ ಅನರ್ಹಗೊಳ್ಳಬಹುದು ಎಂಬ ಸ್ಥಿತಿ ಕಳೆದ ಒಂದು ವಾರದಿಂದಲೂ ಇದೆ. ಆದರೆ ಇದುವರೆಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಗಣಿಗಾರಿಕೆ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ, ತಾವೇ ವಿಸ್ತರಿಸಿಕೊಂಡ ಆರೋಪ ಸಾಬೀತಾದ ಬೆನ್ನಲ್ಲೇ ಸೊರೆನ್ಗೆ ಸಂಕಷ್ಟ ಎದುರಾಗಿದೆ. ಜಾರ್ಖಂಡ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಸೊರೆನ್ ಅನರ್ಹತೆ ಆದೇಶವನ್ನು ರಾಜ್ಯಪಾಲರೂ ಸಿದ್ಧ ಮಾಡಿಟ್ಟಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಆ ಪ್ರಕ್ರಿಯೆ ಮುಂದುವರಿಯುತ್ತಿಲ್ಲ.
ಹೀಗಿರುವಾಗ ಜಾರ್ಖಂಡದಲ್ಲಿ ಸೆಪ್ಟೆಂಬರ್ 5ರಂದು (ನಾಳೆ) ಹೇಮಂತ್ ಸೊರೆನ್ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಲಿದೆ ಎಂದು ವರದಿಯಾಗಿದೆ. ಜಾರ್ಖಂಡ್ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ ಮತ್ತು ಸರ್ಕಾರಕ್ಕೆ ಯಾವುದೇ ಅಪಾಯವೂ ಇಲ್ಲ. 82 ಶಾಸಕರ ಸಾಮರ್ಥ್ಯದ ಜಾರ್ಖಂಡ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್ನ 18 ಮತ್ತು ಆರ್ಜೆಡಿಯ ಒಬ್ಬ ಶಾಸಕರು ಇದ್ದಾರೆ. ಅಂದರೆ ಸರ್ಕಾರದಲ್ಲಿರುವ ಶಾಸಕರ ಬಲ 49. ಜಾರ್ಖಂಡ್ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿ 52 ಶಾಸಕರ ಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆದರೆ ನಂತರ ಮೂವರು ಕಾಂಗ್ರೆಸ್ ಶಾಸಕರು ಭ್ರಷ್ಟಾಚಾರ ಕೇಸ್ನಲ್ಲಿ ಅಮಾನತುಗೊಂಡಿದ್ದಾರೆ. ಹೀಗಾಗಿ ಬಲ 49ಕ್ಕೆ ಕುಸಿದಿದೆ. ಹಾಗಿದ್ದರೂ ಸರ್ಕಾರಕ್ಕೇನೂ ಸಮಸ್ಯೆಯಿಲ್ಲ.
ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗವಾಗುತ್ತಿದ್ದಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮೈತ್ರಿ ಸರ್ಕಾರದ ಶಾಸಕರನ್ನೆಲ್ಲ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇದೇ ಸಮಯವನ್ನು ಬಿಜೆಪಿ ಬಳಸಿಕೊಂಡು, ಶಾಸಕರ ಕುದುರೆ ವ್ಯಾಪಾರ ನಡೆಸಬಹುದು ಎಂಬ ಕಾರಣಕ್ಕೆ ಶಾಸಕರನ್ನೆಲ್ಲ ಕರೆದುಕೊಂಡು ಖುಂತಿ ಜಿಲ್ಲೆಯ ಲತರಾತು ಜಲಾಶಯಕ್ಕೆ ಹೋಗಿದ್ದರು. ಹಾಗೇ ಛತ್ತೀಸ್ಗಢ್ನಲ್ಲಿರುವ ರೆಸಾರ್ಟ್ನಲ್ಲಿಯೂ ಇವರೆಲ್ಲ ಇದ್ದರು. ಇದೀಗ ನಾಳೆ ವಿಶ್ವಾಸ ಮತ ಯಾಚನೆ ನಡೆಯಲಿರುವುದರಿಂದ ಎಲ್ಲರೂ ವಿಧಾನಸಭೆಯಲ್ಲಿ ಹಾಜರು ಇರಲಿದ್ದಾರೆ. ಕೆಲವೇ ದಿನಗಳ ಹಿಂದೆ ದೆಹಲಿ ಆಮ್ ಆದ್ಮಿ ಪಕ್ಷದ ಸರ್ಕಾರವೂ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿತ್ತು.
ಇದನ್ನೂ ಓದಿ: Hemant Soren | ಜಾರ್ಖಂಡ್ ಸಿಎಂ ರಾಜೀನಾಮೆ ನೀಡುತ್ತಿಲ್ಲ, ಆದರೆ ಮುಂದಿನ ನಡೆಯೇನು?