ರಾಂಚಿ: ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್(Jharkhand Cm Hemant Soren)ಗೆ ಅನರ್ಹತೆ ಭೀತಿ ಕಾಡುತ್ತಿದೆ. ಈ ಮಧ್ಯೆ ಕೂಡ ಅವರು ಫುಲ್ ಖುಷಿಯಾಗಿ ಬೋಟ್ ರೈಡ್ ಮಾಡಿದ್ದಾರೆ. ಬರೀ ಅವರೊಬ್ಬರೇ ಅಲ್ಲ, ತಮ್ಮ ಜೆಎಂಎಂ ಪಕ್ಷದ ಮತ್ತು ಮೈತ್ರಿ ಪಕ್ಷ ಕಾಂಗ್ರೆಸ್ನ ಎಲ್ಲ ಶಾಸಕರು-ಸಚಿವರೊಂದಿಗೆ ಸೇರಿ, ಖುಂತಿ ಜಿಲ್ಲೆಯಲ್ಲಿರುವ ಲತರಾತು ಜಲಾಶಯದ ಬೋಟಿಂಗ್ ಪ್ರದೇಶದಲ್ಲಿ ಜಾಲಿ ಮೂಡ್ನಲ್ಲಿ ಬೋಟ್ ರೈಡ್ ಮಾಡಿದ್ದಾರೆ. ಇವರೆಲ್ಲ ತುಂಬ ವಿಶ್ರಾಂತಿ ಮೂಡ್ನಲ್ಲಿ, ಖುಷಿಯಿಂದ ಇರುವ ಫೋಟೋಗಳು ವೈರಲ್ ಆಗುತ್ತಿವೆ.
ಕಲ್ಲು ಗಣಿ ಗುತ್ತಿಗೆ ವಿಸ್ತರಿಸಿಕೊಂಡ ಆರೋಪ ಸಾಬೀತಾದ ಬೆನ್ನಲ್ಲೇ ಹೇಮಂತ್ ಸೊರೆನ್ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗ ಜಾರ್ಖಂಡ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಮುಖ್ಯಮಂತ್ರಿ ಅನರ್ಹಗೊಳ್ಳುತ್ತಿರುವ ಈ ಸಮಯವನ್ನೇ ಬಳಸಿಕೊಂಡು ಬಿಜೆಪಿ, ತಮ್ಮ ಮೈತ್ರಿ ಕೂಟದ ಶಾಸಕರನ್ನು ಸೆಳೆಯಬಹುದು ಎಂಬ ಭಯದಲ್ಲಿ ಸೊರೆನ್ ಅವರು ಈ ಶಾಸಕರು-ಸಚಿವರನ್ನು ಕಾಪಾಡಿಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆಗಸ್ಟ್ 27ರಂದು ಜೆಎಂಎಂ ಮತ್ತು ಕಾಂಗ್ರೆಸ್ನ ಶಾಸಕರೆಲ್ಲ ದೊಡ್ಡದೊಡ್ಡ ಬ್ಯಾಗ್ನೊಂದಿಗೆ ಹೇಮಂತ್ ಸೊರೆನ್ ನಿವಾಸಕ್ಕೆ ತೆರಳಿದ್ದರು. ಅಲ್ಲಿಂದ ಬಸ್ನಲ್ಲಿ ಎಲ್ಲರೂ ಖುಂತಿ ಜಿಲ್ಲೆಯ ಲತರಾತು ಅಣೆಕಟ್ಟಿಗೆ ಹೋಗಿದ್ದಾರೆ. ಅಲ್ಲಿನ ಗೆಸ್ಟ್ಹೌಸ್ನಲ್ಲಿ ತಂಗಿದ್ದಾರೆ.
ಜಾರ್ಖಂಡ್ ಸರ್ಕಾರದಲ್ಲಿ ಜೆಎಂಎಂ ಪಕ್ಷದ 30 ಶಾಸಕರು, ಕಾಂಗ್ರೆಸ್ನ 18 ಮತ್ತು ಆರ್ಜೆಡಿಯ ಒಬ್ಬ ಶಾಸಕ ಇದ್ದಾರೆ. ಅಲ್ಲಿ ಪ್ರತಿಪಕ್ಷ ಬಿಜೆಪಿ 26 ಶಾಸಕರನ್ನು ಹೊಂದಿದೆ. ಚುನಾವಣಾ ಆಯೋಗ ಆಗಸ್ಟ್ 25ರಂದು ರಾಜ್ಯಪಾಲರಿಗೆ ಶಿಫಾರಸ್ಸು ಕಳಿಸಿದ್ದು, ಇದುವರೆಗೂ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ ಸಿಎಂ ಅನರ್ಹತೆ ಆದೇಶ ಸಿದ್ಧವಾಗಿದ್ದು, ಇಂದು (ಆಗಸ್ಟ್ 28) ಸಂಜೆಯ ಹೊತ್ತಿಗೆ ಅದನ್ನು ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ಕಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೇಮಂತ್ ಸೊರೆನ್ ಸಿಎಂ ಗಾದಿ ಮೇಲೆ ತೂಗುಗತ್ತಿ; ದೊಡ್ಡ ಬ್ಯಾಗ್ನೊಂದಿಗೆ ರಾಜ್ಯ ಬಿಟ್ಟು ಹೊರಟ ಶಾಸಕರು!