ರಾಂಚಿ: ಗಣಿ ಗುತ್ತಿಗೆಯನ್ನು ಅಕ್ರಮವಾಗಿ ವಿಸ್ತರಿಸಿಕೊಂಡ ಆರೋಪದಲ್ಲಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಸೋಮವಾರ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಮುಂದಾಗಿದ್ದಾರೆ. ಈ ಉದ್ದೇಶಕ್ಕಾಗಿಯೇ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆಯಲಾಗಿದೆ. ಜಾರ್ಖಂಡ್ ಬಿಕ್ಕಟ್ಟಿ(Jharkhand Crisis)ಗೆ ಶೀಘ್ರವೇ ಪರಿಹಾರ ಸಿಗುವ ನಿರೀಕ್ಷೆ ಇದೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಯುಪಿಎ ಕೂಟದ 30 ಶಾಸಕರು ಐದು ದಿನಗಳಿಂದ ನೆರೆಯ ಛತ್ತೀಸ್‌ಗಢದಲ್ಲಿ ಬೀಡು ಬಿಟ್ಟಿದ್ದರು. ಆ ಶಾಸಕರೆಲ್ಲರೂ ಭಾನುವಾರ ಸಂಜೆ ರಾಂಚಿಗೆ ಆಗಮಿಸಿದ್ದಾರೆ. ಅವರೆಲ್ಲರೂ ಸೋಮವಾರ ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಪಕ್ಷ ಬಿಜೆಪಿ ಆಡಳಿತ ಪಕ್ಷದ ಶಾಸಕರನ್ನು ಖರೀದಿಸಲು ಮುಂದಾಗಿದೆ ಎಂಬ ಆರೋಪವನ್ನು ಆಡಳಿತ ಪಕ್ಷದ ನಾಯಕರು ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಏರಲು ಹೆಣೆದಿರುವ ಬಲೆಯಲ್ಲಿ ಬಿಜೆಪಿಯೇ ಸಿಕ್ಕಿ ಬೀಳಲಿದೆ ಎಂದು ಸಿಎ ಸೊರೆನ್ ಅವರು ಹೇಳಿದ್ದಾರೆ.
ಏನಿದು ಗಣಿ ಗುತ್ತಿಗೆ ಪ್ರಕರಣ?
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಗಣಿಯ ಗುತ್ತಿಗೆ ಅವಧಿಯನ್ನು ತಾವೇ ವಿಸ್ತರಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ನೀಡಿದ ದೂರಿನ ಅನ್ವಯ ಚುನಾವಣೆ ಆಯೋಗವು ತನಿಖೆ ನಡೆಸಿದೆ. ತನಿಖೆ ಬಳಿಕ ಸೊರೆನ್ ಅವರು ನಿಯಮ ಉಲ್ಲಂಘಿಸಿರುವುದು ಕಂಡುಬಂದ ಕಾರಣ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಮುಚ್ಚಿದ ಲಕೋಟೆಯಲ್ಲಿ ಆಯೋಗವು ರಾಜಭವನಕ್ಕೆ ಶಿಫಾರಸು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಜಾರ್ಖಂಡದಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ.
ಇದನ್ನೂ ಓದಿ | ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್ ಸೊರೆನ್