Site icon Vistara News

ಶಾ ವಿರುದ್ಧ ಹೇಳಿಕೆ; ಮಾನಹಾನಿ ಕೇಸ್‌ ರದ್ದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ ಅರ್ಜಿ ವಜಾ, ಮತ್ತೆ ಸಂಕಷ್ಟ

Rahul Gandhi

ರಾಂಚಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಹಿನ್ನಡೆಯಾಗಿದೆ. ಅಮಿತ್‌ ಶಾ ಕುರಿತು ಹೇಳಿಕೆ ನೀಡಿದ ಬಳಿಕ ಬಿಜೆಪಿ ನಾಯಕ ನವೀನ್‌ ಝಾ ಸಲ್ಲಿಸಿದ ಮಾನಹಾನಿ ಪ್ರಕರಣದ (Defamation Case) ರದ್ದುಗೊಳಿಸಬೇಕು ಎಂದು ಕೋರಿ ರಾಹುಲ್‌ ಗಾಂಧಿ ಅವರು ಸಲ್ಲಿಸಿದ ಅರ್ಜಿಯನ್ನು ಜಾರ್ಖಂಡ್‌ ಹೈಕೋರ್ಟ್‌ (Jharkhand High Court) ತಿರಸ್ಕರಿಸಿದೆ. ಇದರಿಂದಾಗಿ ರಾಹುಲ್‌ ಗಾಂಧಿ ಅವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಸೆಷನ್ಸ್‌ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕು” ಎಂದು ರಾಹುಲ್‌ ಗಾಂಧಿ ಪರ ವಕೀಲರಾದ ಪಿಯೂಷ್‌ ಚಿತ್ರೇಶ್‌ ಹಾಗೂ ದಿಪಾಂಕರ್‌ ರೈ ಅವರು ರಾಂಚಿ ಹೈಕೋರ್ಟ್‌ಗೆ ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿ ಅಂಬುಜ್‌ಕಾಂತ್‌ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು. ಇದರಿಂದಾಗಿ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಏನಿದು ಪ್ರಕರಣ?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ರಾಹುಲ್‌ ಗಾಂಧಿ ನೀಡಿದ ಹೇಳಿಕೆಯನ್ನು ಖಂಡಿಸಿ ನವೀನ್‌ ಝಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. “2018ರ ಮಾರ್ಚ್‌ 18ರಂದು ಮಾತನಾಡಿದ್ದ ರಾಹುಲ್‌ ಗಾಂಧಿ, ಅಮಿತ್‌ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದಾರೆ. ಕಾಂಗ್ರೆಸ್‌ ಸಭೆಯಲ್ಲಿಯೇ ರಾಹುಲ್‌ ಗಾಂಧಿ ಅವರು ಅಮಿತ್‌ ಶಾ ಅವರನ್ನು ಕೊಲೆ ಆರೋಪಿ ಎಂದಿದ್ದಾರೆ. ಇದರಿಂದಾಗಿ ಅಮಿತ್‌ ಶಾ ಅವರಿಗೆ ಮಾನಹಾನಿಯಾಗಿದೆ” ಎಂಬುದಾಗಿ ನವೀನ್‌ ಝಾ ಅವರು ಸಲ್ಲಿಸಿದ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Rahul Gandhi: ʼರಾಹುಲ್‌ ಗಾಂಧಿ ಭೇಟಿ ಮಾಡ್ಬೇಕಾ? ಹಾಗಾದ್ರೆ 10 ಕಿಲೋ ತೂಕ ಇಳಿಸು!ʼ

“ರಾಹಲ್‌ ಗಾಂಧಿ ಅವರು ಕೊಲೆ ಆರೋಪಿ ಎಂದು ಕರೆದು ಅಮಿತ್‌ ಶಾ (ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು) ಅವರನ್ನು ಮಾತ್ರ ಅಪಮಾನ ಮಾಡಿದಂತಾಗಿಲ್ಲ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ರಾಹುಲ್‌ ಗಾಂಧಿ ಹೇಳಿಕೆಯಿಂದ ಅವಮಾನವಾಗಿದೆ” ಎಂಬುದಾಗಿ ನವೀನ್‌ ಝಾ ಉಲ್ಲೇಖಿಸಿದ್ದರು. ರಾಹುಲ್‌ ಗಾಂಧಿ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ಅದರಲ್ಲೂ, “ಮೋದಿ ಎಂಬ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ” ಎಂದು ಹೇಳಿದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಸಂಸತ್‌ ಸದಸ್ಯತ್ವದಿಂದಲೇ ಅನರ್ಹಗೊಂಡಿದ್ದರು. ಸುಪ್ರೀಂ ಕೋರ್ಟ್‌ ಇದಕ್ಕೆ ತಡೆ ನೀಡಿದ ಕಾರಣ ರಾಹುಲ್‌ ಗಾಂಧಿ ಅವರು ಸದಸ್ಯತ್ವವನ್ನು ಮರಳಿ ಪಡೆದಿದ್ದಾರೆ. ಈಗ ಮತ್ತೊಂದು ಪ್ರಕರಣದಲ್ಲಿ ಅವರಿಗೆ ಸಂಕಷ್ಟ ಎದುರಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version