ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮುಖ್ಯಮಂತ್ರಿ ಗಾದಿ ಕಳೆದುಕೊಳ್ಳುವ ಲಕ್ಷಣ ದಟ್ಟವಾಗಿದೆ. ಸೊರೆನ್ ಅವರು ತಮ್ಮ ಒಡೆತನದಲ್ಲಿ ಇದ್ದ ಕಲ್ಲು ಗಣಿ ಗುತ್ತಿಗೆ ಅವಧಿಯನ್ನು ತಾವೇ ವಿಸ್ತರಿಸಿಕೊಂಡಿದ್ದಾರೆ. ಇದು ಅಕ್ರಮ ಮತ್ತು ಅಧಿಕಾರ ದುರುಪಯೋಗದ ಪರಮಾವಧಿ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿತ್ತು. ಅದನ್ನು ತನಿಖೆಗೆ ಒಳಪಡಿಸಿದ ಚುನಾವಣಾ ಆಯೋಗ, ಅಕ್ರಮ ನಡೆದಿದ್ದು ಸತ್ಯ ಎಂದು ಹೇಳಿದ್ದಲ್ಲದೆ, ಮುಖ್ಯಮಂತ್ರಿಯನ್ನು ಅನರ್ಹಗೊಳಿಸುವಂತೆ ಅಲ್ಲಿನ ರಾಜ್ಯಪಾಲ ರಮೇಶ್ ಬೈಸ್ಗೆ ಶಿಫಾರಸು ಮಾಡಿತ್ತು. ಅದರಂತೆ ರಾಜ್ಯಪಾಲರು ಕೂಡ ಈಗಾಗಲೇ ಅನರ್ಹತೆ ಆದೇಶವನ್ನು ಸಿದ್ಧಮಾಡಿಟ್ಟುಕೊಂಡಿದ್ದು, ಅದನ್ನು ಇಂದು (ಆಗಸ್ಟ್ 27) ಚುನಾವಣಾ ಆಯೋಗಕ್ಕೂ ಕಳಿಸಿಕೊಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹೀಗೆ ಸೊರೆನ್ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಸ್ಥಿತಿಯ ಅಂಚಿನಲ್ಲಿ ಬಂದು ನಿಂತಿರುವಾಗ, ಇಂದು ಹಲವು ಶಾಸಕರು ತಮ್ಮ ಬ್ಯಾಗ್ಗಳು, ಲಗೇಜ್ಗಳೊಂದಿಗೆ ಹೇಮಂತ್ ಸೊರೆನ್ ಮನೆಗೆ ತಲುಪಿದ್ದಾರೆ. ಹೇಮಂತ್ ಸೊರೆನ್ ಅನರ್ಹವಾಗುತ್ತಿರುವ ಹೊತ್ತು ವಿಪಕ್ಷಗಳಿಗೆ ಲಾಭವಾಗಬಾರದು. ಕುದುರೆ ವ್ಯಾಪಾರ (ಅಂದರೆ ವಿಪಕ್ಷಗಳು ಆಡಳಿತ ಪಕ್ಷದ ಸರ್ಕಾರದ ಶಾಸಕರನ್ನು ಸೆಳೆಯುವ) ನಡೆಯಬಾರದು. ಈ ಸರ್ಕಾರ ಪತನವಾಗಲು ಬಿಡಬಾರದು ಎಂಬ ಕಾರಣಕ್ಕೆ ಶಾಸಕರನ್ನೆಲ್ಲ ಛತ್ತೀಸ್ಗಢಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.
ಜಾರ್ಖಂಡ್ನಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್ಜೆಡಿ ಮೈತ್ರಿ ಸರ್ಕಾರವಿದೆ. ಒಟ್ಟು 81 ಸದಸ್ಯ ಬಲ ಇರುವ ಅಲ್ಲಿನ ವಿಧಾನಸಭೆಯಲ್ಲಿ ಜೆಎಂಎಂನ 30, ಕಾಂಗ್ರೆಸ್ನ 18 ಶಾಸಕರು ಮತ್ತು ಆರ್ಜೆಡಿಯ ಒಬ್ಬ ಶಾಸಕರು ಇದ್ದಾರೆ. ಅಂದರೆ ಆಡಳಿತದಲ್ಲಿರುವ ಸರ್ಕಾರದ ಶಾಸಕರ ಸಂಖ್ಯೆ 49. ಹಾಗೇ, ಬಿಜೆಪಿ 26 ಶಾಸಕರನ್ನು ಹೊಂದಿದೆ. ಜಾರ್ಖಂಡ್ನಲ್ಲಿ ಯಾವುದೇ ಪಕ್ಷ ಅಧಿಕಾರ ರಚನೆ ಮಾಡಬೇಕು ಎಂದರೆ ಕನಿಷ್ಠ 41 ಶಾಸಕರ ಬಲ ಹೊಂದಿರಬೇಕು. ಇದೀಗ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯೇ ಅನರ್ಹಗೊಳ್ಳುತ್ತಿರುವುದರಿಂದ, ಪ್ರತಿಪಕ್ಷ ಬಿಜೆಪಿ ಇದೇ ಸಂದರ್ಭವನ್ನು ಉಪಯೋಗಿಸಿಕೊಳ್ಳಬಹುದು ಎಂಬ ಆತಂಕ ಸಹಜವಾಗಿಯೇ ಕಾಡಿದೆ. ಆಗಸ್ಟ್ 26ರಂದು ಹೇಮಂತ್ ಸೊರೆನ್ ಮನೆಯಲ್ಲಿ ಒಂದು ಮಹತ್ವದ ಸಭೆ ಕೂಡ ನಡೆದಿದೆ. ಅದರ ಬೆನ್ನಲ್ಲೇ ಇಂದು ಶಾಸಕರನ್ನು ಛತ್ತೀಸ್ಗಢ್ಕ್ಕೆ ಕಳಿಸಲಾಗುತ್ತಿದೆ. ಅಲ್ಲಿಯೂ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಅಲ್ಲಿ ಜಾರ್ಖಂಡ್ ಎಂಎಲ್ಎಗಳು ಸೇಫ್ ಎಂದು ಭಾವಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Hemant Soren | ಜಾರ್ಖಂಡ್ ಸಿಎಂ ತಲೆದಂಡ, ಹೇಮಂತ್ ಸೊರೆನ್ ಪತ್ನಿಯೇ ಮುಂದಿನ ಮುಖ್ಯಮಂತ್ರಿ?