Site icon Vistara News

Jharkhand Politics: ಇಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪಯಿ ಸೋರೆನ್ ಪ್ರಮಾಣ ವಚನ

Champai Soren

ರಾಂಚಿ: ಸಾಕಷ್ಟು ಹೈಡ್ರಾಮಾ ನಡುವೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ (Jharkhand CM) ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ (JMM Leader) ಹಾಗೂ ಸಿಬು ಸೋರೆನ್ ಅವರ ನಿಷ್ಠ ಚಂಪಯಿ ಸೋರೆನ್ (Champai Soren) ಅವರು ಶುಕ್ರವಾರ(ಫೆ.2) ಅಧಿಕಾರ ಸ್ವೀಕರಿಸಲಿದ್ದಾರೆ. ಗುರುವಾರ ತಡ ರಾತ್ರಿ ಜಾರ್ಖಂಡ್ ರಾಜ್ಯಪಾಲರು (Jharkhand Governor) ಅವರನ್ನು ನಿಯೋಜಿತ ಸಿಎಂ ಘೋಷಣೆ ಮಾಡಿ, ಸರ್ಕಾರ ರಚಿಸಲು ಆಹ್ವಾನಿಸಿದರು. ಸರ್ಕಾರ ರಚಿಸಲು ಅಗತ್ಯ ಶಾಸಕರ ಬೆಂಬಲ ಇದ್ದರೂ ರಾಜ್ಯಪಾಲರು ಆಹ್ವಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈ ಹಿಂದೆ ಸಿಎಂ ಆಗಿದ್ದ ಹೇಮಂತ್ ಸೋರೆನ್ ಅವರನ್ನು ಬಂಧಿಸಿತ್ತು. ಹಾಗಾಗಿ, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಜೆಎಂಎಂ ಹಾಗೂ ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರು ಸಾರಿಗೆ ಸಚಿವರಾಗಿದ್ದ ಚಂಪಯಿ ಸೋರೆನ್ ಅವರನ್ನು ಆಯ್ಕೆ ಮಾಡಿದ್ದರು.

ಗುರುವಾರ ರಾತ್ರಿ ಹೈಡ್ರಾಮಾ; ರೆಸಾರ್ಟ್‌ಗೆ ತೆರಳಿದ ಶಾಸಕರು

ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ (Hemant Soren) ಅವರನ್ನು ಬಂಧಿಸಿದಾಗಿನಿಂದ ರಾಜಕೀಯ ಬಿಕ್ಕಟ್ಟು (Jharkhand) ಮುಂದುವರಿದಿದೆ. 81 ಸದಸ್ಯ ಬಲದಲ್ಲಿ ಸರ್ಕಾರ ರಚನೆಗೆ 41 ಶಾಸಕರ ಬೆಂಬಲ ಬೇಕು. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಕೂಟವು(JMM alliance) ಸದ್ಯಕ್ಕೆ 43 ಸದಸ್ಯರನ್ನು ಬಲ ಹೊಂದಿದ್ದು, ಅದು 47ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಿದ್ದೂ, ರಾಜ್ಯಪಾಲರು ಮೈತ್ರಿಕೂಟ ನಾಯಕನಿಗೆ ಸರ್ಕಾರ ರಚಿಸಲು ಆಹ್ವಾನಿಸಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಶಾಸಕರ ಖರೀದಿ ಯತ್ನ ನಡೆಯಬಹುದು(Resort Politics) ಎಂಬ ಭೀತಿಯಿಂದ, ಮೈತ್ರಿಕೂಟದ ಸದಸ್ಯರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ.

ಶಾಸಕರನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಮತ್ತು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಚಂಪಯಿ ಸೊರೆನ್ ಅವರ ಕಣ್ಗಾವಲಿನಲ್ಲಿ ಚಾರ್ಟರ್ಡ್ ವಿಮಾನಗಳಿಗೆ ಹತ್ತಿಸಲಾಯಿತು. ಮೈತ್ರಿಕೂಟದ ಶಾಸಕರನ್ನು ತೆಲಂಗಾಣ ರಾಜ್ಯಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಶಾಸಕರ ಖರೀದಿ ಭೀತಿಯ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಲಾಗಿದೆ.

“ನಾವು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವೆ… ಬಿಜೆಪಿಯವರು ಎಂಥ ಜನರು ಎಂದು ನಿಮಗೆ ತಿಳಿದಿದೆ … ಅವರು ಯಾವುದೇ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು. ಒಟ್ಟು 43 ಶಾಸಕರು ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಜಾರ್ಖಂಡ್ ಮುಖ್ಯಸ್ಥ, ರಾಜೇಶ್ ಠಾಕೂರ್ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Hemant Soren: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್ ಸೋರೆನ್​​​ಗೆ ಒಂದು ದಿನದ ನ್ಯಾಯಾಂಗ ಬಂಧನ

Exit mobile version