ರಾಂಚಿ: ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ (Hemant Soren) ಅವರನ್ನು ಬಂಧಿಸಿದಾಗಿನಿಂದ ರಾಜಕೀಯ ಬಿಕ್ಕಟ್ಟು (Jharkhand) ಮುಂದುವರಿದಿದೆ. 81 ಸದಸ್ಯ ಬಲದಲ್ಲಿ ಸರ್ಕಾರ ರಚನೆಗೆ 41 ಶಾಸಕರ ಬೆಂಬಲ ಬೇಕು. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಕೂಟವು(JMM alliance) ಸದ್ಯಕ್ಕೆ 43 ಸದಸ್ಯರನ್ನು ಬಲ ಹೊಂದಿದ್ದು, ಅದು 47ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಿದ್ದೂ, ರಾಜ್ಯಪಾಲರು ಮೈತ್ರಿಕೂಟ ನಾಯಕನಿಗೆ ಸರ್ಕಾರ ರಚಿಸಲು ಆಹ್ವಾನಿಸಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಶಾಸಕರ ಖರೀದಿ ಯತ್ನ ನಡೆಯಬಹುದು(Resort Politics) ಎಂಬ ಭೀತಿಯಿಂದ, ಮೈತ್ರಿಕೂಟದ ಸದಸ್ಯರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗುತ್ತಿದೆ.
ಶಾಸಕರನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಮತ್ತು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಚಂಪಯಿ ಸೊರೆನ್ ಅವರ ಕಣ್ಗಾವಲಿನಲ್ಲಿ ಚಾರ್ಟರ್ಡ್ ವಿಮಾನಗಳಿಗೆ ಹತ್ತಿಸಲಾಯಿತು. ಮೈತ್ರಿಕೂಟದ ಶಾಸಕರನ್ನು ತೆಲಂಗಾಣ ರಾಜ್ಯಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಶಾಸಕರ ಖರೀದಿ ಭೀತಿಯ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಲಾಗಿದೆ.
#WATCH | Ranchi: Jharkhand Congress president Rajesh Thakur says, "We are going to the airport. You know what kind of people they are, they can do anything anytime. A total of 43 MLAs are going…" pic.twitter.com/stNK8RTkXy
— ANI (@ANI) February 1, 2024
“ನಾವು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವೆ… ಬಿಜೆಪಿಯವರು ಎಂಥ ಜನರು ಎಂದು ನಿಮಗೆ ತಿಳಿದಿದೆ … ಅವರು ಯಾವುದೇ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು. ಒಟ್ಟು 43 ಶಾಸಕರು ಹೋಗುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಜಾರ್ಖಂಡ್ ಮುಖ್ಯಸ್ಥ, ರಾಜೇಶ್ ಠಾಕೂರ್ ಹೇಳಿದ್ದರು.
ರಾಜ್ಯಪಾಲರನ್ನು ಭೇಟಿ ಮಾಡಿದ ಸೋರೆನ್
ಇದಕ್ಕೂ ಮೊದಲು ಚಂಪಯಿ ಸೊರೆನ್ ಅವರು ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಮುಂದಿನ ರಾಜ್ಯ ಸರ್ಕಾರವನ್ನು ರಚಿಸಲು ಆಹ್ವಾನಿಸುವಂತೆ ಒತ್ತಾಯಿಸಿದರು. “ಹೊಸ ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಒತ್ತಾಯಿಸಿದ್ದೇವೆ. ರಾಜ್ಯಪಾಲರು ಅದನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ನಾವು 43 ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಿದ್ದೇವೆ. ಈ ಸಂಖ್ಯೆ 46-47 ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ… ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ. ನಮ್ಮ ‘ಘಟಬಂಧನ್’ ಅಥವಾ ಮೈತ್ರಿ ತುಂಬಾ ಪ್ರಬಲವಾಗಿದೆ ಎಂದು ಚಂಪಯಿ ಸೊರೆನ್ ಹೇಳಿದರು. ಐವರು ಶಾಸಕರೊಂದಿಗೆ ಚಂಪಯಿ ಅವರು ರಾಜ್ಯಪಾಲರನ್ನು ಭೇಟಿಯಾದರು. ಜೆಎಂಎಂನ ಹಿರಿಯ ಸದಸ್ಯ ಮತ್ತು ಏಳು ಬಾರಿ ಶಾಸಕರಾಗಿರುವ ಸೊರೆನ್ ಅವರನ್ನು ಎಲ್ಲಾ ಶಾಸಕರು ಬೆಂಬಲಿಸುವ 49 ಸೆಕೆಂಡುಗಳ ವೀಡಿಯೊವನ್ನು ರಾಜ್ಯಪಾಲರಿಗೆ ತೋರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಂಬರ್ ಗೇಮ್ ಹೇಗಿದೆ?
ಜಾರ್ಖಂಡ್ ವಿಧಾನಸಭೆಯು ಒಟ್ಟು 81 ಸದಸ್ಯ ಬಲವನ್ನು ಹೊಂದಿದೆ. ಸರ್ಕಾರ ರಚಿಸಲು 41 ಸದಸ್ಯರ ಬೆಂಬಲ ಬೇಕು. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಕೂಟದಲ್ಲಿ ಒಟ್ಟು 47 ಶಾಸಕರಿದ್ದಾರೆ. ಈ ಪೈಕಿ 29 ಜೆಎಂಎಂ, 17 ಕಾಂಗ್ರೆಸ್ ಹಾಗೂ ಒಬ್ಬರು ಆರ್‌ಜೆಡಿ ಸದಸ್ಯರಿದ್ದಾರೆ. ಇನ್ನು ಬಿಜೆಪಿಯ ಬಳಿ 25 ಶಾಕರಿದ್ದರೆ, ಎಜೆಎಸ್‌ಯು 3, ಎನ್‌ಸಿಪಿ, ಎಡ ಪಕ್ಷಗಳು ತಲಾ ಒಬ್ಬ ಶಾಸಕರನ್ನು ಹೊಂದಿದೆ. ಹಾಗೂ ಮೂವರು ಸ್ವತಂತ್ರ ಶಾಸಕರಿದ್ದಾರೆ.
ಸದ್ಯಕ್ಕೆ 43 ಶಾಸಕರು ಚಂಪಯಿ ಸೋರೆನ್ ಮೇಲೆ ವಿಶ್ವಾಸ ಹೊಂದಿದ್ದಾರೆ. ಈ ಪೈಕಿ ಒಬ್ಬ ಶಾಸಕನನ್ನೂ ಬಿಜೆಪಿ ಸೆಳೆಯಲು ಯಶಸ್ವಿಯಾದರೆ, ಲೋಕಸಭೆಗೆ ಮುಂಚೆ ಜೆಎಂಎಂ ಅಧಿಕಾರವನ್ನು ಕಳೆದುಕೊಳ್ಳಬಹುದು ಮತ್ತು ಉತ್ತರ ಭಾರತದಲ್ಲಿ ಬಿಜೆಪಿಯು ಮತ್ತೊಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಬಿಜೆಪಿ ಪಕ್ಷವನ್ನು ಬೆಂಬಲಿಸಲು ಕನಿಷ್ಠ 15 ಇತರ ಶಾಸಕರ ಅಗತ್ಯವಿದೆ. ಆ 15 ರಲ್ಲಿ ಮೂವರು ಸ್ವತಂತ್ರ ಶಾಸಕರು ಮತ್ತು ಇತರ ಮೂವರು ಎಜೆಎಸ್‌ಯುನಿಂದ ಬರಬಹುದು.ಉಳಿದ ಒಂಬತ್ತು ಮಂದಿಯನ್ನು ಕಾಂಗ್ರೆಸ್, ಜೆಎಂಎಂ ಅಥವಾ ಆರ್‌ಜೆಡಿಯಿಂದ ಸೆಳೆಯಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: Hemant Soren: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ಗೆ ಒಂದು ದಿನದ ನ್ಯಾಯಾಂಗ ಬಂಧನ