Site icon Vistara News

ಗೋಡ್ಸೆ ಆರಾಧಕ ಮೋದಿ ಎಂದ ಗುಜರಾತ್‌ ಶಾಸಕನ ಬಂಧನ: ಅಸ್ಸಾಂ ಪೊಲೀಸರಿಂದ ಮೇವಾನಿ ವಶಕ್ಕೆ

ಗುವಾಹಟಿ: ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿದ್ದ ಗುಜರಾತ್‌ನ ವಡಗಾಮ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.

ಅಸ್ಸಾಂನಿಂದ ಆಗಮಿಸಿದ ಪೊಲೀಸರು ಶಾಸಕನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಪ್ರಾರಂಭದಿಂದಲೂ ಮೋದಿ ವಿರೋಧಿ ಭಾಷಣಕಾರರಾಗಿ ಗುರುತಿಸಿಕೊಂಡ ಮೇವಾನಿ, 2017ರಲ್ಲಿ ಅಧಿಕೃತ ರಾಜಕೀಯ ಪ್ರವೇಶಿಸಿದ್ದರು. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ದಲಿತ ಮೀಸಲಾತಿಯಿದ್ದ ವಡಗಾಮ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಪ್ರಾರಂಭದಲ್ಲಿ ಆಮ್‌ ಆದ್ಮಿ ಪಕ್ಷದಲ್ಲಿದ್ದ ಮೇವಾನಿ ಅವರನ್ನು ಆಮ್‌ ಆದ್ಮಿ ಪಕ್ಷ ಬೆಂಬಲಿಸಿತು. 2012ರಲ್ಲಿ ತನ್ನದೇ ಶಾಸಕರನ್ನು ಹೊಂದಿದ್ದರೂ ಮೇವಾನಿ ಅವರಿಗೆ ಬೆಂಬಲ ನೀಡುವ ಸಲುವಾಗಿ ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಯನ್ನು ಹಿಂಪಡೆಯಿತು. ಬಿಜೆಪಿ ಜತೆಗಿನ ನೇರ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್‌ ಚಕ್ರವರ್ತಿ ಅವರನ್ನು 19,696 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಗುಜರಾತ್‌ ವಿಧಾನಸಭೆ ಈಗಾಗಲೆ 4 ವರ್ಷ ಪೂರ್ಣಗೊಳಿಸಿದ್ದು, 2022ರ ಡಿಸೆಂಬರ್‌ ವೇಳೆಗೆ ಚುನಾವಣೆ ಎದುರಾಗಲಿದೆ.

ಏಪ್ರಿಲ್‌ 20ರಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಜಾಮ್‌ನಗರದಲ್ಲಿ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರಕ್ಕೆ ಚಾಲನೆ ನೀಡಲು ಆಗಮಿಸುವವರಿದ್ದರು. ಏಪ್ರಿಲ್‌ 18ರಂದು ಟ್ವೀಟ್‌ ಮಾಡಿದ್ದ ಮೇವಾನಿ, “ಗೋಡ್ಸೆಯನ್ನು ಆರಾಧ್ಯ ದೈವ ಎಂದು ಪರಿಗಣಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್‌ 20ರಂದು ಗುಜರಾತ್‌ ಪ್ರವಾಸದಲ್ಲಿದ್ದಾರೆ. ಕೋಮುಗಲಭೆಗಳು ಸಂಭವಿಸಿರುವ ಗುಜರಾತ್‌ನ ಹಿಮ್ಮತ್‌ ನಗರ, ಖಂಭಾತ್‌ ಹಾಗೂ ವೇರಾವಲ್‌ ಪ್ರದೇಶಗಳಲ್ಲಿ ಶಾಂತಿಗಾಗಿ ಕರೆ ನೀಡಬೇಕು. ಮಹಾತ್ಮಾ ಮಂದಿರ ನಿರ್ಮಿಸಿದವರಿಂದ ಇಷ್ಟಾದರೂ ನಿರೀಕ್ಷೆ ಹೊಂದಬಹುದಲ್ಲವೇ?” ಎಂದಿದ್ದರು. ಕೆಲ ದಿನಗಳ ಹಿಂದೆ ಕೋಮು ಹಿಂಸಾಚಾರಕ್ಕೆ ಕಾರಣವಾಗಿದ್ದ ಈ ಪ್ರದೇಶಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು ಹಾಗೂ ಅನೇಕರು ಟ್ವಿಟ್ಟರ್‌ಗೆ ದೂರು ನೀಡಿದ್ದರು. ಈ ಟ್ವೀಟನ್ನು ಟ್ವಿಟ್ಟರ್‌ ಅಮಾನತು ಮಾಡಿತ್ತು.

ಜಿಗ್ನೇಶ್‌ ಮೇವಾನಿ ಮಾಡಿದ್ದ ಟ್ವೀಟ್‌.

ಏಪ್ರಿಲ್‌ 19ರಂದು ಅಸ್ಸಾಂನ ಕೋಕ್ರಝಾರ್‌ ಬಿಜೆಪಿ ನಾಯಕ ಆರೂಪ್‌ ದುಬೆ ಅವರು ಕೊಕ್ರಝಾರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು. ಮೇವಾನಿ ತಮ್ಮ ಟ್ವೀಟ್‌ನಲ್ಲಿ ಮೋದಿಯವರನ್ನು ಗೋಡ್ಸೆಗೆ ಹೋಲಿಕೆ ಮಾಡಿದ್ದಾರೆ. ಈ ಟ್ವೀಟ್‌ ಸಾಕಷ್ಟು ಹರಿದಾಡಿದ್ದು, ಸಮುದಾಯಗಳ ನಡುವೆ ಧ್ವೇಷಭಾವನೆ ಬಿತ್ತುತ್ತದೆ ಎಂದಿದ್ದರು. ದೂರನ್ನು ಸ್ವೀಕರಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಪಾಲನ್‌ಪುರ್‌ ಸರ್ಕ್ಯೂಟ್‌ಹೌಸ್‌ನಲ್ಲಿ ಮೇವಾನಿ ತಂಗಿದ್ದರು. ರಾತ್ರಿ 11.30ರ ಸುಮಾರಿಗೆ ಆಗಮಿಸಿದ ಅಸ್ಸಾಂ ಪೊಲೀಸರು ಗುಜರಾತ್‌ಗೆ ಕರೆದೊಯ್ದಿದ್ದಾರೆ. ಪ್ರಾರಂಭದಲ್ಲಿ ಗುವಾಹಟಿಗೆ ಕರೆದೊಯ್ದ ಪೊಲೀಸರು ರಸ್ತೆ ಮಾರ್ಗದಲ್ಲಿ 220 ಕಿ.ಮೀ. ದೂರವಿರುವ ಕೊಕ್ರಝಾರ್‌ಗೆ ಕರೆದುಕೊಂಡು ಹೋಗಿದ್ದಾರೆ.

ಹೆಚ್ಚಿನ ಓದಿಗಾಗಿ | Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

ಇದೇ ವೇಳೆ ಅಸ್ಸಾಂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಕಂಕಣ ದಾಸ್‌ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಗುರುವಾರ ಜಾಮೀನು ದೊರಕಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಮೇವಾನಿ ಬಂಧನಕ್ಕೆ ರಾಜಕೀಯ ವಲಯದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ, “ಮೋದಿಯವರೇ ಸರ್ಕಾರಿ ಯಂತ್ರವನ್ನು ಬಳಕೆ ಮಾಡಿಕೊಂಡು ನೀವು ಭಿನ್ನಮತವನ್ನು ದಮನ ಮಾಡಲು ಪ್ರಯತ್ನಿಸಬಹುದು. ಆದರೆ ನೀವು ಸತ್ಯವನ್ನು ಎಂದಿಗೂ ಬಂಧಿಸಲಾರಿರಿ” ಎಂದಿದ್ದಾರೆ.

ಸಿಪಿಐಎಂ ಪ್ರತಿಕ್ರಿಯಿಸಿ, ಆಧಾರರಹಿತ ಆರೋಪದಲ್ಲಿ ಮೇವಾನಿ ಅವರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ ಹಾಗೂ ಕೂಡಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಟ್ವೀಟ್‌ ಮಾಡಿದೆ.

ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಶ್‌ ಠಾಕೂರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಹೆಚ್ಚಿನ ಓದಿಗಾಗಿ: ಭಾರತದಲ್ಲಿ ಬಡತನ 12% ಇಳಿಕೆ: ವಿಶ್ವಬ್ಯಾಂಕ್‌ ವರದಿ

Exit mobile version