ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರ ಲಾಲ್ ನೆಹರು (JNU) ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ, ಅಧ್ಯಯನ, ಸಾಧನೆಗಿಂತ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ವಿದ್ಯಾರ್ಥಿಗಳು ದೊಣ್ಣೆಗಳನ್ನು ಹಿಡಿದು ಬಡಿದಾಡಿಕೊಂಡ ಬೆನ್ನಲ್ಲೇ ಈಗ ವಿವಿಯ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ (Anti Brahmin Slogans) ಘೋಷಣೆಗಳನ್ನು ಬರೆಯಲಾಗಿದೆ. ಇದು ಎಡಪಂಥೀಯ ವಿದ್ಯಾರ್ಥಿಗಳದ್ದೇ ಉಪಟಳ ಎಂಬ ಆಕ್ರೋಶ ವ್ಯಕ್ತವಾಗಿದೆ.
ವಿವಿಯ ಗೋಡೆಗಳ ಮೇಲೆ ‘ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ’, ‘ಬ್ರಾಹ್ಮಣರೇ, ಬನಿಯಾ ಸಮುದಾಯದವರೇ, ನಾವು ನಿಮ್ಮೆದುರು ಬಂದು ನಿಲ್ಲುತ್ತೇವೆ. ಸೇಡು ತೀರಿಸಿಕೊಳ್ಳುತ್ತೇವೆ’, ‘ಇಲ್ಲಿ ರಕ್ತಪಾತ ಆಗುತ್ತದೆ’, ‘ಬ್ರಾಹ್ಮಣರೇ ವಿವಿ ಕ್ಯಾಂಪಸ್ ಬಿಟ್ಟು ಹೊರಡಿ’ ಎಂಬ ಸಾಲುಗಳನ್ನು ಬರೆಯಲಾಗಿದೆ. ಪ್ರೊಫೆಸರ್‌ಗಳ ಕೋಣೆಗಳ ಮೇಲೂ ಹೀಗೆಯೇ ಬರೆಯಲಾಗಿದೆ.
ಎಬಿವಿಪಿ ಆಕ್ರೋಶ
ವಿವಿಗಳ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಸಾಲುಗಳನ್ನು ಬರೆದಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಖಂಡಿಸಿದೆ. “ಶಿಕ್ಷಣ ಸಂಸ್ಥೆಯಲ್ಲಿ ಕಮ್ಯುನಿಸ್ಟ್ ಗೂಂಡಾಗಳ ಇಂತಹ ಹೀನ ಕೃತ್ಯವನ್ನು ಖಂಡಿಸುತ್ತೇವೆ. ವಿವಿ ಆವರಣದಲ್ಲಿರುವ ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್-೨ ಬಿಲ್ಡಿಂಗ್, ಪ್ರೊಫೆಸರ್‌ಗಳ ಕೋಣೆ ಮೇಲೆ ಬರೆಯುವುದು ಖಂಡನೀಯ. ಮುಕ್ತ ಚರ್ಚೆ, ಸಂವಾದ ನಡೆಯಬೇಕಾದ ಜಾಗದಲ್ಲಿ ಬೇರೊಂದು ಸಮುದಾಯದ ವಿರುದ್ಧ ದ್ವೇಷ ಕಾರುವುದು ಸರಿಯಲ್ಲ” ಎಂದು ಎಬಿವಿಪಿ ಜೆನ್‌ಯು ಪ್ರೆಸಿಡೆಂಟ್ ರೋಹಿತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಎಡಪಂಥೀಯರೇ ಇಂತಹ ಕೃತ್ಯ ಎಸಗಿದ್ದಾರೆ” ಎಂದು ಜೆಎನ್‌ಯು ಟೀಚರ್ಸ್ ಫೋರಂ ಕೂಡ ಖಂಡನೆ ವ್ಯಕ್ತಪಡಿಸಿದೆ.
ಇದನ್ನೂ ಓದಿ | Clash In JNU | ಜೆಎನ್‌ಯುನಲ್ಲಿ 2 ಗುಂಪುಗಳ ಮಧ್ಯೆ ಘರ್ಷಣೆ, ದೊಣ್ಣೆ ಹಿಡಿದು ಬಡಿದಾಟ, ಇಬ್ಬರಿಗೆ ಗಾಯ