Site icon Vistara News

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

job opportunity

ನವದೆಹಲಿ: ಭಾರತದಲ್ಲಿ ನೇಮಕಾತಿ ಚಟುವಟಿಕೆಯು 2% ಮಾಸಿಕ ಕುಸಿತವನ್ನು ಕಂಡಿದೆ (2023ರ ನವೆಂಬರ್ ಮತ್ತು ಅಕ್ಟೋಬರ್) ಮತ್ತು 10% ವಾರ್ಷಿಕ ಕುಸಿತ (2022 ನವೆಂಬರ್-2023 ನವೆಂಬರ್) ದಾಖಲಾಗಿದೆ ಎಂದು ವರದಿ ತಿಳಿಸಿದೆ. ಈತನ್ಮಧ್ಯೆ ಲಾಜಿಸ್ಟಿಕ್ಸ್, ಸಾಗಾಣಿಕೆ ಮತ್ತು ಖರೀದಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ 6% ಬೆಳವಣಿಗೆಯನ್ನು ಕಂಡಿದೆ (Job News).

ಪ್ರತಿಭಾನ್ವೇಷಣಾ ವೇದಿಕೆಯ ಫೌಂಡಿಟ್ (Foundit ಹಿಂದಿನ Monster APAC & ME) ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ. ಫೌಂಡಿಟ್ ಇನ್‌ಸೈಟ್ಸ್‌ ಟ್ರ್ಯಾಕರ್ (Fit)ನಲ್ಲಿ 2023ರ ನೇಮಕಾತಿ ಪ್ರಕ್ರಿಯೆ ಕುರಿತಾದ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ನೇಮಕಾತಿ ಸೂಚ್ಯಂಕವು ನವೆಂಬರ್ 2022ರಲ್ಲಿ 277 ಇತ್ತು. 2023ರ ನವೆಂಬರ್‌ನಲ್ಲಿ ಇದು 249ಕ್ಕೆ ಇಳಿದಿದೆ. ಅದಾಗ್ಯೂ ಭಾರತೀಯ ಕೈಗಾರಿಕೆಗಳು, ಸ್ಟಾರ್ಟ್ ಅಪ್‌ಗಳು ಮತ್ತು ಉತ್ಪಾದನಾ ಘಟಕಗಳ ಸಹಾಯದಿಂದ ದೇಶದ ಆರ್ಥಿಕ ಭವಿಷ್ಯವು ಭರವಸಾದಾಯಕವಾಗಿದೆ ಎಂದು ವರದಿ ಹೇಳಿದೆ.

ಉದ್ಯೋಗ ಅಂತರವನ್ನು ಕಡಿಮೆ ಮಾಡಲು ಪಿಎಸ್‌ಯು(Public Sector Undertakings)ಮುಂದಾಗಿದ್ದು, ಅದರ ಫಲವಾಗಿ ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು 7.2%ರಿಂದ 6.6% ಕ್ಕೆ ಇಳಿಕೆಯಾಗಿದೆ ಎನ್ನುವ ಅಂಶದ ಮೇಲೆ ವರದಿ ಬೆಳಕು ಚೆಲ್ಲಿದೆ.

ಉದ್ಯೋಗ ಹೆಚ್ಚಳಕ್ಕೆ ಕ್ರಮ

ಸರ್ಕಾರ, ಪಿಎಸ್‌ಯು ಮತ್ತು ರಕ್ಷಣಾ ಕೈಗಾರಿಕೆಗಳು (14%) ಉದ್ಯೋಗ ಒದಗಿಸುವಲ್ಲಿ ಮುಂದಿವೆ. ಸರ್ಕಾರದ ನೀತಿಗಳು ಮತ್ತು ಯೋಜನೆಗಳಾದ ‘ಮೇಕ್ ಇನ್ ಇಂಡಿಯಾ’, ಆತ್ಮ ನಿರ್ಭರ ಭಾರತ್ ರೋಜ್‌ಗಾರ್‌ ಯೋಜನೆ (ABRY) ಇತ್ಯಾದಿ ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ಇವು ನಿರುದ್ಯೋಗ ದರವನ್ನು ಕಡಿಮೆ ಮಾಡಲು ಗಣನೀಯ ಕೊಡುಗೆ ಸಲ್ಲಿಸಿವೆ. ಮೆಟ್ರೋ ರೈಲು ಮತ್ತು ರೈಲುಗಳ(ವಂದೇ ಭಾರತ್ ಸೇವೆ ಸೇರಿದಂತೆ) ತ್ವರಿತ ವಿಸ್ತರಣೆಯೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಗರಿಷ್ಠ ಪ್ರಯತ್ನ ಪಡುತ್ತಿದೆ. “ಯುವ ಜನತೆ ಉದ್ಯೋಗಗಳನ್ನು ಪಡೆಯಲು ಕೌಶಲ್ಯವನ್ನು ಹೆಚ್ಚಿಸಬೇಕು. ಮುಂಬರುವ ದಿನಗಳಲ್ಲಿ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆʼʼ ಎಂದು ಫೌಂಡಿಟ್ ಹೇಳಿದೆ.

ವೇತನ ಶ್ರೇಣಿ

ಫ್ರೆಶರ್‌ಗಳಿಗೆ ಕನಿಷ್ಠ ವೇತನ 2,10,994 ರೂ.ಗಳಿಂದ (BPO / ITES) 3,94,794 ರೂ.ಗಳವರೆಗೆ (ಐಟಿ-ಹಾರ್ಡ್‌ವೇರ್‌, ಸಾಫ್ಟ್‌ವೇರ್‌) ಮತ್ತು 11-15 ವರ್ಷಗಳ ಅನುಭವ ಹೊಂದಿರುವ ವೃತ್ತಿಪರರಿಗೆ ವೇತನವು 19,60,577 ರೂ.ಗಳಿಂದ (ಬ್ಯಾಂಕಿಂಗ್ / ಹಣಕಾಸು ಸೇವೆಗಳು, ವಿಮೆ) 33,09,292 ರೂ.ಗಳವರೆಗೆ ಇದೆ. ಐಟಿ-ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಉದ್ಯಮವು ಹೆಚ್ಚಿನ ವೇತನವನ್ನು ನೀಡುತ್ತದೆ. ನಂತರದ ಸ್ಥಾನದಲ್ಲಿ ಬ್ಯಾಂಕಿಂಗ್ / ಹಣಕಾಸು ಸೇವೆಗಳು / ವಿಮಾ ಉದ್ಯಮ ಇದೆ. ಭಾರತದಲ್ಲಿ ನುರಿತ ಐಟಿ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇರುವುದು ಇದಕ್ಕೆ ಕಾರಣ. ಬಿಪಿಒ / ಐಟಿಇಎಸ್ ಮತ್ತು ಶಿಕ್ಷಣ ಉದ್ಯಮವು ಕಡಿಮೆ ವೇತನ ಶ್ರೇಣಿಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಆಫೀಸ್ ಇಕ್ವಿಪ್‌ಮೆಂಟ್ ಮತ್ತು ಆಟೋಮೇಷನ್ ವಲಯವು ನೇಮಕಾತಿಯಲ್ಲಿ 4% ಬೆಳವಣಿಗೆಯನ್ನು ದಾಖಲಿಸಿದೆ. ಆಟೋಮೇಷನ್ ಮತ್ತು ಎಐ ತಂತ್ರಜ್ಞಾನಗಳ ಅಳವಡಿಕೆ ಉತ್ಪಾದಕತೆಯ ಹೆಚ್ಚಳ, ಜಿಡಿಪಿ ಬೆಳವಣಿಗೆಗೆ ಕಾರಣವಾಗಲಿದೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಬೆಳವಣಿಗೆ ದಾಖಲಿಸಿದ ಇತರ ಕೈಗಾರಿಕೆಗಳೆಂದರೆ ಚಿಲ್ಲರೆ ವ್ಯಾಪಾರ (3%) ಮತ್ತು ಹೆಲ್ತ್‌ಕೇರ್‌ / ಫಾರ್ಮಾಸ್ಯುಟಿಕಲ್ಸ್ ಕೈಗಾರಿಕೆ (2%).

ಗಮನಾರ್ಹ ಕೊಡುಗೆ ನೀಡಿದ ಎರಡನೇ ಹಂತದ ನಗರಗಳು

ಎರಡನೇ ಹಂತದ ನಗರಗಳಲ್ಲಿ ವೈವಿಧ್ಯಮಯ ಪ್ರತಿಭೆಗಳ ಲಭ್ಯತೆಯು ಹೆಚ್ಚುತ್ತಿದೆ. ಇದರ ಅಂಗವಾಗಿ ಕೊಯಮತ್ತೂರು ನೇಮಕಾತಿಯಲ್ಲಿ ಗಮನಾರ್ಹವಾದ 13% ಹೆಚ್ಚಳ ದಾಖಲಿಸಿದೆ. ಕೊಯಮತ್ತೂರು ಹೊರತುಪಡಿಸಿ ಕೇರಳದ ಕೊಚ್ಚಿಯಲ್ಲಿಯೂ ನೇಮಕಾತಿ ಚಟುವಟಿಕೆಯಲ್ಲಿ 4% ಹೆಚ್ಚಳವಾಗಿದೆ. ಇನ್ನು ಜೈಪುರದಲ್ಲಿ 2% ಹೆಚ್ಚಳ ಕಂಡುಬಂತು. ಇದಕ್ಕೆ ವಿರುದ್ಧವಾಗಿ ಕೋಲ್ಕತಾ, ಮುಂಬೈ ಮತ್ತು ಪುಣೆಯಂತಹ ಕೆಲವು ನಗರಗಳ ನೇಮಕಾತಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕ್ರಮವಾಗಿ 5%, 6% ಮತ್ತು 4%ರಷ್ಟು ಕುಸಿತ ದಾಖಲಿಸಿವೆ.

ಕುಸಿತ ಕಂಡುಬಂದ ಕ್ಷೇತ್ರಗಳು

ಎಂಜಿನಿಯರಿಂಗ್ / ಉತ್ಪಾದನೆ (-5%), ಸೀನಿಯರ್‌ ಮ್ಯಾನೇಜ್‌ಮೆಂಟ್‌ ಪೊಸಿಷನ್‌ (-4%), ಮಾರಾಟ ಮತ್ತು ಅಭಿವೃದ್ಧಿ (-4%), ಮತ್ತು ಗ್ರಾಹಕ ಸೇವಾ ಸ್ಥಾನಗಳು (-4%) ನೇಮಕಾತಿಯಲ್ಲಿ ಕುಸಿತ ದಾಖಲಿಸಿದವು. ಈ ತಿಂಗಳು ಮಾರ್ಕೆಟಿಂಗ್ ಮತ್ತು ಸಂವಹನ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಮತ್ತು ದೂರಸಂಪರ್ಕ ಕ್ಷೇತ್ರಗಳ ಚಟುವಟಿಕೆ ಮಧ್ಯ,ಮವಾಗಿತ್ತು.

ಇದನ್ನೂ ಓದಿ: Ram Temple: ರಾಮಮಂದಿರ ಉದ್ಘಾಟನೆಗೆ ರಾಮ, ಸೀತೆಗೂ ಆಹ್ವಾನ! ವಿಐಪಿ ಲಿಸ್ಟ್‌ನಲ್ಲಿ ಯಾರಿದ್ದಾರೆ?

Exit mobile version