ಜೋಧ್ಪುರ: 21 ವರ್ಷದ ಯುವತಿಯೊಬ್ಬಳ ಬಾಲ್ಯ ವಿವಾಹವನ್ನು ರಾಜಸ್ಥಾನದ ಜೋಧ್ಪುರದ ಕೌಟುಂಬಿಕ ನ್ಯಾಯಾಲಯವೊಂದು ರದ್ದುಗೊಳಿಸಿದೆ. ಜೋಧ್ಪುರದ ಹಳ್ಳಿಯೊಂದರಲ್ಲಿ ಜನಿಸಿದ ರೇಖಾ ಎಂಬ ಹುಡುಗಿ ತನಗೆ ಬಾಲ್ಯದಲ್ಲಿ ಆದ ಮದುವೆಯನ್ನು ಅಮಾನ್ಯ ಮಾಡಬೇಕು ಎಂದು ಮನವಿ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಆ ಮದುವೆ ರದ್ದಾಗಿದೆ. ರೇಖಾ ಮುಖದಲ್ಲಿ ಮಂದಹಾಸ ಮೂಡಿದೆ.
2001ರಲ್ಲಿ ರೇಖಾ ಜನಿಸಿದ್ದಾರೆ. ಅದಾಗಿ ಒಂದು ವರ್ಷಕ್ಕೆ ಅಂದರೆ 2002ರಲ್ಲಿ ಆಕೆಯ ಅಜ್ಜ ತೀರಿಕೊಂಡರು. ಹೀಗೆ ಅವರು ಸಾಯುತ್ತಿದ್ದಂತೆ ಒಂದು ವರ್ಷದ ಮಗು ರೇಖಾರನ್ನು ಅದೇ ಹಳ್ಳಿಯ ಹುಡುಗನೊಬ್ಬನ ಜತೆ ಮದುವೆ ಮಾಡಲಾಯಿತು. ಅಷ್ಟಾದ ಮೇಲೆ ಆಕೆಗೆ 18 ವರ್ಷ ತುಂಬುವವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚೆಗೆ ಹುಡುಗನ ಪಾಲಕರು ಗೌನಾ ಆಚರಣೆಯ ಪ್ರಸ್ತಾಪ ಇಟ್ಟಿದ್ದರು. ಅಂದರೆ ಹುಡುಗಿಯನ್ನು ಗಂಡನ ಮನೆಗೆ ಕರೆತರುವ ಶಾಸ್ತ್ರ. ಬಾಲ್ಯದಲ್ಲಿ ವಿವಾಹವಾದ ತಕ್ಷಣ ಹುಡುಗಿ ಪತಿಯ ಮನೆಗೆ ಬಂದಿರುವುದಿಲ್ಲ. ಆಕೆ ವಯಸ್ಸಿಗೆ ಬರುತ್ತಿದ್ದಂತೆ ಈ ಗೌನಾ ಸಂಪ್ರದಾಯದ ಮೂಲಕ ಆಕೆಯನ್ನು ಪತಿ ಮನೆಗೆ ತುಂಬಿಸಿಕೊಳ್ಳಲಾಗುತ್ತದೆ. ರೇಖಾಳನ್ನು ಮದುವೆಯಾದ ಹುಡುಗನ ತಾಯಿಯಂತೂ ಇತ್ತೀಚೆಗೆ ತುಂಬ ಒತ್ತಡ ತರುತ್ತಿದ್ದರು.
ಆದರೆ ಇನ್ನೂ ಓದಬೇಕು ANM (Auxiliary Nurse Midwifery) ಡಿಪ್ಲೋಮಾ ಕೋರ್ಸ್ ಮಾಡಬೇಕು ಎಂಬ ಬಯಕೆ ಇಟ್ಟುಕೊಂಡಿದ್ದ ರೇಖಾ ಸಾಂಸಾರಿಕ ಜವಾಬ್ದಾರಿ ಹೊರಲು ನಿರಾಕರಿಸಿದರು. ಯಾವ ಕಾರಣಕ್ಕೂ ಈ ಮದುವೆಯನ್ನು ನಾನು ಒಪ್ಪುವುದಿಲ್ಲ. ಬಾಲ್ಯದಲ್ಲಿ ಮದುವೆಯಾದ ಹುಡುಗನ ಮನೆಗೆ ಹೋಗುವುದಿಲ್ಲ ಎಂದು ಕುಳಿತರು. ಅದನ್ನು ಕೇಳಿದ ಆ ಹುಡುಗನ ಮನೆಯವರು ರೇಖಾ ಕುಟುಂಬಕ್ಕೆ ಬೆದರಿಕೆ ಹಾಕಿದರು. ಸ್ಥಳೀಯ ಪಂಚಾಯಿತಿಗೆ ದೂರು ಕೊಟ್ಟರು. ಅಷ್ಟೇ ಅಲ್ಲ, 10 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿಯೂ ಬೆದರಿಕೆ ಒಡ್ಡಿದರು.
ಆಗ ರೇಖಾ ತನಗೆ ಸಹಾಯ ಮಾಡುವಂತೆ ಸಾರಥಿ ಟ್ರಸ್ಟ್ ಎಂಬ ಎನ್ಜಿಒ ಒಂದನ್ನು ಸಂಪರ್ಕಿಸಿದರು. ಹಾಗೇ, ಬಾಲ್ಯ ವಿವಾಹದ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕಲೆಹಾಕಿದರು. ಕಾನೂನಾತ್ಮಕ ವಿಷಯವನ್ನೆಲ್ಲ ತಿಳಿದುಕೊಂಡು, ಅದೇ ಎನ್ಜಿಒ ಸಹಾಯದಿಂದ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರದೀಪ್ ಕುಮಾರ್ ಮೋದಿ ‘ರೇಖಾಗೆ ಒಂದು ವರ್ಷದಲ್ಲಿ ಆದ ಮದುವೆ ಮಾನ್ಯವಲ್ಲ. ಶತಮಾನಗಳಿಂದಲೂ ಬಾಲ್ಯ ವಿವಾಹ ಪಿಡುಗಾಗಿ ಕಾಡುತ್ತಿದೆ. ಈಗಲೂ ಅದನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಾಗಿ. ಆದರೆ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತೊಡೆದು ಹಾಕಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು’ ಎಂದು ಹೇಳಿದ್ದಾರೆ. ಇತ್ತ ರೇಖಾ ಕೂಡ ಫುಲ್ ಖುಷಿಯಾಗಿದ್ದಾರೆ. ‘ನನಗೆ ಕೋರ್ಟ್ ತೀರ್ಪಿನಿಂದ ಸಿಕ್ಕಾಪಟೆ ಖುಷಿಯಾಗಿದೆ. ಇನ್ನೇನಿದ್ದರೂ ಓದು, ಮುಂದಿನ ವೃತ್ತಿ ಜೀವನದ ಕಡೆಗೇ ಗಮನ ಹರಿಸುತ್ತೇನೆ’ ಎಂದು ಹೇಳಿದ್ದಾರೆ. ಅದರಲ್ಲೂ ರೇಖಾ ಹುಟ್ಟುಹಬ್ಬದ ದಿನವೇ ಈ ತೀರ್ಪು ಬಂದಿದ್ದು ಆಕೆಯ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಚಹಾರ್ ವಿವಾಹಕ್ಕೆ ಹೋಗದೆ ಬಾಲ್ಯದ ಗೆಳೆಯನ ಮದುವೆಯಲ್ಲಿ ಕುರ್ತಾ ಪೈಜಾಮ ತೊಟ್ಟು ಮಿಂಚಿದ ರಾಹುಲ್