ನವದೆಹಲಿ: ಚೀನಾದಿಂದ ಹಣ ಹೂಡಿಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ (Raid On NewsClick) ಡಿಜಿಟಲ್ ಮಾಧ್ಯಮ ಸಂಸ್ಥೆ ಪತ್ರಕರ್ತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ನ್ಯೂಸ್‌ಕ್ಲಿಕ್‌ನ 30ಕ್ಕೂ ಅಧಿಕ ಪತ್ರಕರ್ತರ (Journalists) ನಿವಾಸಗಳ ಮೇಲೆ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ (Special Cell Of Delhi Police) ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ನ್ಯೂಸ್‌ಕ್ಲಿಕ್ ವಿರುದ್ಧ ಕಾನೂನಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚೀನಾದಿಂದ ಹಣ ಹೂಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ. ಇದರ ಬೆನ್ನಲ್ಲೇ, ನ್ಯೂಸ್‌ಕ್ಲಿಕ್‌ನ ಹಲವು ಪತ್ರಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಖಲೆ ಪರಿಶೀಲನೆಯಷ್ಟೇ ಮಾಡಲಾಗಿದ್ದು, ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ವಿಚಾರಣೆಗಾಗಿ ಕೆಲವು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಕೂಡ ತಿಳಿದುಬಂದಿದೆ.
Raids underway at different premises linked to NewsClick, no arrests made so far: Delhi Police Sources pic.twitter.com/DmnKNU517C
— ANI (@ANI) October 3, 2023
ಏನಿದು ಪ್ರಕರಣ?
ನ್ಯೂಸ್‌ಕ್ಲಿಕ್ ಸಂಸ್ಥೆಯಲ್ಲಿ ಚೀನಾ ಹೂಡಿಕೆ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಚೀನಾ ಪರವಾಗಿ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. 2021ರಲ್ಲಿ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಜಪ್ತಿ ಮಾಡಿದೆ.
ಇದನ್ನೂ ಓದಿ: Chandrayaan 3: ಬಿಬಿಸಿ ಆ್ಯಂಕರ್‌ಗೆ ಆನಂದ್ ಮಹೀಂದ್ರಾ ತಿರುಗೇಟು! ಆಗಿದ್ದಾದರೂ ಏನು?
ನ್ಯೂಯಾರ್ಕ್ ಟೈಮ್ಸ್ ವರದಿ ಏನು?
ನ್ಯೂಸ್‌ಕ್ಲಿಕ್‌ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. “ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‌ಕ್ಲಿಕ್ ಕೂಡ ಇದೆ” ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಚೀನಾ ಹೂಡಿಕೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಆರೋಪಗಳನ್ನು ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ (Prabir Purakayastha) ಅಲ್ಲಗಳೆದಿದ್ದಾರೆ. ಇದೆಲ್ಲ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.