Site icon Vistara News

JP Nadda: ಚುನಾವಣೆಯಲ್ಲಿ ಸ್ಥಾನ ಕುಸಿದರೂ ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ; ಜೆ.ಪಿ.ನಡ್ಡಾಗೆ ಲಕ್

JP Nadda

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯ ಸ್ಥಾನಗಳು 240ಕ್ಕೆ ಕುಸಿದಿದೆ. ಮೈತ್ರಿ ಪಕ್ಷಗಳ ಬಲದೊಂದಿಗೆ ಬಿಜೆಪಿಯು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೇರಿದೆ. ಇನ್ನು, ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರ ಅಧಿಕಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೂನ್‌ನಲ್ಲಿಯೇ ನಡ್ಡಾ ಅವರ ಅಧಿಕಾರದ ಅವಧಿಯು ಮುಗಿದಿದ್ದು, ನೂತನ ಅಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೀಗ, ಡಿಸೆಂಬರ್‌ವರೆಗೆ ನಡ್ಡಾ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆ.ಪಿ. ನಡ್ಡಾ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಆರೋಗ್ಯ ಖಾತೆಗೆ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಗಳನ್ನೂ ನೀಡಲಾಗಿದೆ. ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆಯಾದ ಕಾರಣ ಈ ಬಾರಿ ಜೆ.ಪಿ.ನಡ್ಡಾ ಅವರ ಬದಲಿಗೆ ಬೇರೆಯವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ, ಬಿಜೆಪಿ ಅಧ್ಯಕ್ಷರನ್ನು ನೇಮಕ ಮಾಡಲು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಹೆಚ್ಚಿನ ಚಿಂತನೆ ನಡೆಸುತ್ತಿದ್ದು, ಡಿಸೆಂಬರ್‌ನಲ್ಲಿಯೇ ನೂತನ ಅಧ್ಯಕ್ಷರನ್ನು ನೇಮಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸಚಿವರಾದಾಗ ಜೆಪಿ ನಡ್ಡಾ ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ಜವಾಬ್ದಾರಿ ಪ್ರಾರಂಭಿಸಿದರು. ನಡ್ಡಾ 2020ರಲ್ಲಿ ಪೂರ್ಣ ಸಮಯದ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. 2023ರ ಜನವರಿಯಲ್ಲಿ ಜೆ.ಪಿ.ನಡ್ಡಾ ಅವರ ಮೊದಲ ಅವಧಿಯು ಮುಕ್ತಾಯಗೊಂಡಿತ್ತು. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. 2024ರ ಫೆಬ್ರವರಿಯಲ್ಲೂ ಜೂನ್‌ವರೆಗೆ ಜೆ.ಪಿ.ನಡ್ಡಾ ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು.

ಕೆಲ ತಿಂಗಳ ಹಿಂದೆ ಜೆ.ಪಿ.ನಡ್ಡಾ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದರು. ಮಾಜಿ ಪ್ರದಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಕ್ಕೆ ಹೋಲಿಸಿದರೆ ಪ್ರಸ್ತುರ ಆರ್‌ಎಸ್‌ಎಸ್‌ನ ಉಪಸ್ಥಿತಿ ಬಿಜೆಪಿಯಲ್ಲಿ ಹೇಗೆ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ನಡ್ಡಾ ಅವರು, ʼʼಆರಂಭದಲ್ಲಿ, ನಾವು ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದೆವು ಮತ್ತು ಆಗ ಆರ್‌ಎಸ್‌ಎಸ್‌ನ ಅಗತ್ಯವಿತ್ತು. ಇಂದು ನಾವು ಬೆಳೆದಿದ್ದೇವೆ ಮತ್ತು ನಾವು ಸಮರ್ಥರಾಗಿದ್ದೇವೆ. ಬಿಜೆಪಿ ತನ್ನಷ್ಟಕ್ಕೆ ತಾನೇ ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಅದೇ ವ್ಯತ್ಯಾಸʼʼ ಎಂದಿದ್ದರು.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Exit mobile version