ವಾರಾಣಸಿ: ದೆಹಲಿಯಲ್ಲಿ ಕಳ್ಳತನವಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರ ಪತ್ನಿಯ ಕಾರು ಕೊನೆಗೂ ವಾರಾಣಸಿಯಲ್ಲಿ ಪತ್ತೆಯಾಗಿದೆ. ಜೆ.ಪಿ. ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ (Mallika Nadda) ಅವರ ಟೊಯೋಟಾ ಫಾರ್ಚುನರ್ (Toyota Fortuner) ಕಾರು ಕಳೆದ ಮಾರ್ಚ್ 19ರಂದು ದೆಹಲಿಯಲ್ಲಿ ಕಳ್ಳತನವಾಗಿತ್ತು. ಈಗ ಭಾನುವಾರ (ಏಪ್ರಿಲ್ 7) ವಾರಾಣಸಿಯಲ್ಲಿ ಕಾರು ಪತ್ತೆಯಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೆ.ಪಿ. ನಡ್ಡಾ ಅವರ ಪತ್ನಿಯ ಕಾರು ಕದ್ದ ಶಾಹಿದ್ ಹಾಗೂ ಶಿವಾಂಗ್ ತ್ರಿಪಾಠಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಉತ್ತರ ಪ್ರದೇಶದ ಫರೀದಾಬಾದ್ ಬಳಿಯ ಬದ್ಖಾಲ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಜೆ.ಪಿ. ನಡ್ಡಾ ಅವರ ಪತ್ನಿಯ ಕಾರು ಕದಿಯಬೇಕು ಎಂದೇ ಕ್ರೆಟಾ ಕಾರಿನಲ್ಲಿ ದೆಹಲಿಗೆ ತೆರಳಿದ್ದ ಖದೀಮರು ಮಾರ್ಚ್ 19ರಂದು ದೆಹಲಿಯ ಗೋವಿಂದ್‌ಪುರಿಯಲ್ಲಿ ಕಾರು ಕದ್ದಿದ್ದರು.
BJP National President JP Nadda's Fortuner which was stolen from Delhi was recovered from Varanasi. Two accused Shivang Tripathi and Shahid have been arrested. The car was being prepared to be sold in Nagaland. This car was stolen on March 19. pic.twitter.com/CRlmaQfOaJ
— Mohd Nadeem Siddiqui🇮🇳 (@nadeemwrites) April 7, 2024
ನಾಗಾಲ್ಯಾಂಡ್‌ಗೆ ಕಳುಹಿಸಲು ಪ್ಲಾನ್
ದೆಹಲಿಯಲ್ಲಿ ಕಾರು ಕಳ್ಳತನ ಮಾಡಿದ ಶಾಹಿದ್ ಹಾಗೂ ಶಿವಾಂಗ್ ತ್ರಿಪಾಠಿಯು, ಅದನ್ನು ಬದ್ಖಾಲ್‌ವರೆಗೆ ಚಾಲನೆ ಮಾಡಿಕೊಂಡು ಬಂದಿದ್ದರು. ಬದ್ಖಾಲ್‌ನಲ್ಲಿ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ ಇವರು, ಅದನ್ನು ನಾಗಾಲ್ಯಾಂಡ್‌ಗೆ ಕಳುಹಿಸುವ ಪ್ಲಾನ್ ರೂಪಿಸಿದ್ದರು. ಅಲಿಗಢ, ಲಖೀಮ್‌ಪುರ ಖೇರಿ, ಬರೇಲಿ, ಸೀತಾಪುರ ಹಾಗೂ ಲಖನೌ ಮೂಲಕ ಅದನ್ನು ವಾರಾಣಸಿಗೆ ಕೊಂಡೊಯ್ದಿದ್ದರು. ಅಲ್ಲಿಂದ, ಅದನ್ನು ನಾಗಾಲ್ಯಾಂಡ್‌ಗೆ ತೆಗೆದುಕೊಂಡು ಹೋಗುವ ಪ್ಲಾನ್ ಮಾಡಿದ್ದರು ಎಂದು ತಿಳಿದುಬಂದಿದೆ.
ಹಿಮಾಚಲ ಪ್ರದೇಶದಲ್ಲಿ ನೋಂದಣಿಯಾದ ಎಚ್‌ಪಿ 03 ಡಿ 0021 ನಂಬರ್‌ನ ಕಾರನ್ನು ಸರ್ವಿಸ್ ಮಾಡಿಸಲು ಚಾಲಕ ಜೋಗಿಂದರ್ ಸಿಂಗ್ ಅವರು ಮಾರ್ಚ್ 19ರಂದು ಗೋವಿಂದ್‌ಪುರಿಗೆ ತೆಗೆದುಕೊಂಡು ಹೋಗಿದ್ದರು. ಕಾರನ್ನು ಸರ್ವಿಸ್ ಸೆಂಟರ್‌ನಲ್ಲಿ ಬಿಟ್ಟ ಜೋಗಿಂದರ್ ಸಿಂಗ್ ಊಟಕ್ಕೆ ತೆರಳಿದ್ದರು. ಆದರೆ, ಊಟ ಮುಗಿಸಿಕೊಂಡು ಬರುವಷ್ಟರಲ್ಲಿ ಕಾರು ಕಳ್ಳತನವಾಗಿತ್ತು ಎಂಬುದಾಗಿ ಚಾಲಕ ಜೋಗಿಂದರ್ ಸಿಂಗ್ ತಿಳಿಸಿದ್ದರು. ಪ್ರಕರಣದ ಬಳಿಕ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ: BJP Karnataka: ವಿಕಸಿತ ಭಾರತಕ್ಕಾಗಿ ಮೋದೀಜಿ ಶ್ರಮ: ಜೆ.ಪಿ.ನಡ್ಡಾ