ಮಿರ್ಜಾಪುರ: ನ್ಯಾಯಾಧೀಶರೊಬ್ಬರು ಗೌನ್ ಧರಿಸುತ್ತಿರುವಾಗ ಅವರದ್ದೇ ಪಿಸ್ತೂಲ್ನಿಂದ ಗುಂಡು ಹಾರಿ ಗಾಯಗೊಂಡ ಘಟನೆ ಉತ್ತರ ಪ್ರದೇಶ (Uttar Pradesh)ದ ಮಿರ್ಜಾಪುರದಲ್ಲಿ ನಡೆದಿದೆ. ಇಲ್ಲಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ತಲೇವರ್ ಸಿಂಗ್ (Talewar Singh) ಅವರು ಈ ಅಪಾಯಕ್ಕೆ ಒಳಗಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಗುರುವಾರವೇ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಅಂದು ಕೋರ್ಟ್ಗೆ ಬಂದ ನ್ಯಾಯಾಧೀಶರು ತಮ್ಮ ಚೇಂಬರ್ನಲ್ಲಿ ಎದ್ದುನಿಂತು ಗೌನ್ ಧರಿಸುತ್ತಿದ್ದರು. ಈ ವೇಳೆ ಅವರ ರಿವಾಲ್ವರ್ ಕೆಳಗೆ ಬಿದ್ದಿದೆ, ಅಷ್ಟೇ ಅಲ್ಲ ಅಕಸ್ಮಾತ್ ಆಗಿ ಅದರಿಂದ ಫೈರಿಂಗ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ನ್ಯಾಯಾಧೀಶ ತಲೇವರ್ ಸಿಂಗ್, ‘ನನ್ನ ಪಿಸ್ತೂಲ್ನಿಂದಲೇ ಗುಂಡು ಹಾರಿದೆ’ ಎಂದು ತಿಳಿಸಿದ್ದಾರೆ.
ಜತೆಗೆ ಪಿಸ್ತೂಲ್ ಸೇರಿ, ಇಂಥ ಆಯುಧಗಳನ್ನು ಇಟ್ಟುಕೊಳ್ಳುವುದು ಎಷ್ಟು ಸುರಕ್ಷಿತವೋ ಅಷ್ಟೇ ಅಪಾಯಕಾರಿ. ಅದರ ಬಳಕೆಯಲ್ಲಿ ಸ್ವಲ್ಪವೇ ಎಡವಿದರೂ ತಿರುಗಿ ನಮ್ಮ ಪ್ರಾಣವನ್ನೇ ತೆಗೆಯುತ್ತವೆ. ಈ ಹಿಂದೆಯೂ ಹಲವು ಪೊಲೀಸರು ಹೀಗೆ ತಮ್ಮದೇ ಜೇಬಿನಲ್ಲಿದ್ದ ಪಿಸ್ತೂಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡ ಘಟನೆಗಳು ನಡೆದಿವೆ. ಎರಡು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಚೇತನ್ ಎಂಬುವರು ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದಾಗ ಅದರಿಂದ ಗುಂಡು ಹಾರಿ ಜೀವವನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Air Pistol : ಕುಡಿದ ಮತ್ತಲ್ಲಿ ರಸ್ತೆಯಲ್ಲೇ ಏರ್ ಪಿಸ್ತೂಲ್ ಬಿಟ್ಟು ಹೋದ ದುಷ್ಕರ್ಮಿಗಳು; ರಾಬರಿ ಕೃತ್ಯಕ್ಕೆ ಹೊಂಚು ಶಂಕೆ