ನವದೆಹಲಿ: ಜುಲೈ 18ರಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭಾ ಕಾರ್ಯಾಲಯ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಂಸತ್ ಕಲಾಪದ ವೇಳೆ ಚರ್ಚೆ ನಡೆಸುವಾಗ ಯಾವೆಲ್ಲ ಪದಗಳನ್ನು ಪ್ರಯೋಗ ಮಾಡಬಾರದು ಎಂಬುದನ್ನೂ ಉಲ್ಲೇಖಿಸಲಾಗಿದೆ. ಈ ಶಬ್ದಗಳನ್ನು ʼಅಸಂಸದೀಯʼ ಎಂದು ವ್ಯಾಖ್ಯಾನಿಸಲಾಗಿದ್ದು, ಈ ಸಲ ಯಾರೂ ಕೂಡ ಸಂಸತ್ತಿನಲ್ಲಿ ಅಧಿವೇಶನದ ವೇಳೆ ಈ ಕೆಳಗಿನ ಶಬ್ದಗಳನ್ನು ಬಳಸುವಂತಿಲ್ಲ.
ನಿಷೇಧಿತಗೊಂಡ ಪ್ರಮುಖ ಶಬ್ದಗಳು ಇವು..
Jumlajeevi (ಪೊಳ್ಳು ಮಾತುಗಳನ್ನಾಡುವವ), Baal Buddhi (ಬಾಲಿಶ ಬುದ್ಧಿ), Covid spreader (ಕೊವಿಡ್ ಸೋಂಕು ಹರಡುವವ), Snoopgate (ಅಕ್ರಮ ನಿಗಾ), Anarchist (ಅರಾಜಕತಾವಾದಿ), Shakuni (ಕುತಂತ್ರಿಗೆ ಬಳಸುವ ಪರ್ಯಾಯ ಪದ), Dictatorial (ಸರ್ವಾಧಿಕಾರಿ), Taanashah ಮತ್ತು Taanashahi (ಸರ್ವಾಧಿಕಾರಿ-ಸರ್ವಾಧಿಕಾರವನ್ನು ಸೂಚಿಸುವ ಹಿಂದಿ ಶಬ್ದಗಳು), Vinash Purush (ವಿಧ್ವಂಸಕಾರಿ ಮನುಷ್ಯ), Jaichand (ಜತೆಗಿದ್ದುಕೊಂಡು ವಂಚನೆ ಮಾಡುವವರಿಗೆ ಬಳಸುವ ಪದ), Khalistani (ಖಲಿಸ್ತಾನಿ), khoon se kheti (ರಕ್ತದಿಂದ ಫಸಲು), Dohra charitra (ದ್ವಿಪಾತ್ರ), Nikamma (ಅನುಪಯುಕ್ತ), Nautanki (ಗಿಮಿಕ್), Dhindora Peetna (ಡ್ರಮ್ ಬಾರಿಸುವುದು), Behri Sarkar (ಚಂದಾ ಎತ್ತುವ ಸರ್ಕಾರ).
ಸಾಮಾನ್ಯವಾಗಿ ಸರ್ಕಾರವನ್ನು ದೂಷಿಸುವಾಗ, ಇನ್ನೊಬ್ಬ ರಾಜಕೀಯ ನಾಯಕನನ್ನು ಹೀಗಳೆಯಾವಾಗ ಇಂಥ ಪದಗಳನ್ನು ಪ್ರಯೋಗ ಮಾಡುವುದನ್ನು ನಾವು ಕೇಳಿದ್ದೇವೆ. ಇದೀಗ ಬಿಡುಗಡೆಯಾದ ಪಟ್ಟಿಯಲ್ಲಿ ಈ ಮೇಲಿನ ಶಬ್ದಗಳ ಬಳಕೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದ ವೇಳೆ ಬಳಸುವಂತಿಲ್ಲ. ಇವಿಷ್ಟೇ ಅಲ್ಲ, ʼಚಮಚಾ, ಲಾಲಿಪಾಪ್, ಭ್ರಷ್ಟ, ನಾಟಕ ಮಾಡುವವ, ಚಮಚಾಗಿರಿ, ಚೇಲಾಗಳು, ದಲ್ಲಾಳಿ, ದಾದಾಗಿರಿ, ವಿಶ್ವಾಸಘಾತ್, ಲೈಂಗಿಕ ದೌರ್ಜನ್ಯ, ನಿಂದನೆʼ ಮತ್ತಿತರ ಅರ್ಥ ಬರುವ ಹಿಂದಿ-ಇಂಗ್ಲಿಷ್ ಶಬ್ದಗಳನ್ನೂ ಬಳಸುವಂತಿಲ್ಲ.
ರಾಹುಲ್ ಗಾಂಧಿ ಕಿಡಿ
ಅಸಂಸದೀಯ ಶಬ್ದಗಳು ಎಂದು ಪರಿಗಣಿಸಿ, ಸಂಸತ್ತಿನಲ್ಲಿ ಹತ್ತು-ಹಲವು ಪದಗಳನ್ನು ನಿಷೇಧಿಸಿದ್ದನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್, ಪ್ರಿಯಾಂಕಾ ಗಾಂಧಿ ವಾದ್ರಾ, ಟಿಎಂಸಿ ನಾಯಕರಾದ ಡೆರೆಕ್ ಒಬ್ರೇನ್, ಮಹುವಾ ಮೊಯಿತ್ರಾ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ಆಪ್ ಮುಖಂಡ ರಾಘವ್ ಛಡ್ಡಾ ಸೇರಿ ಅನೇಕರು ಖಂಡಿಸಿದ್ದಾರೆ. ಟ್ವೀಟ್ ಮಾಡಿದ ರಾಹುಲ್ ಗಾಂಧಿ ಈ ಪದಗಳ ಬಳಕೆ ನಿಷೇಧವನ್ನು ʼನವ ಭಾರತಕ್ಕಾಗಿ ನವ ಶಬ್ದಕೋಶʼ ಎಂದು ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲ ʼಯಾವೆಲ್ಲ ಶಬ್ದಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರು ಸರ್ಕಾರವನ್ನು ನಿಭಾಯಿಸುತ್ತಿರುವ ರೀತಿಯನ್ನು ವಿವರಿಸುತ್ತವೆಯೋʼ ಅವೆಲ್ಲ ಪದಗಳೂ ಅಸಂಸದೀಯ ಎನ್ನಿಸಿಕೊಂಡು ನಿಷೇಧವಾಗಿವೆʼ ಎಂದು ಹೇಳಿದ್ದಾರೆ.
ಮಹುವಾ ಮೊಯಿತ್ರಾ ಪ್ರತಿಕ್ರಿಯೆ ನೀಡಿ, ʼಈಗ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಳಸಬಾರದು ಎಂದು ಹೇಳಲಾದ ಶಬ್ದಗಳ ಪಟ್ಟಿಯಲ್ಲಿ ʼಸಂಘಿʼ ಎಂಬ ಪದವೇ ಇಲ್ಲವಲ್ಲ !ʼ ಎಂದಿದ್ದಾರೆ. ʼತಾವು ಮಾಡಿದ ಭ್ರಷ್ಟಾಚಾರವನ್ನು ಮಾಸ್ಟರ್ ಸ್ಟ್ರೋಕ್ ಎಂದು ಕರೆಯಬೇಕು ಎಂಬುದು ಈ ಸರ್ಕಾರದ ಆಶಯ. ಹಾಗೇ, 2 ಕೋಟಿ ಉದ್ಯೋಗ ಭರವಸೆ ನೀಡಿ, ಅದನ್ನು ನೆರವೇರಿಸದೆ ಇರುವವರನ್ನು ಇಂದು ಜುಮ್ಲಾ ಜೀವಿ ಎನ್ನಲು ಸಾಧ್ಯವಿಲ್ಲʼ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಪದ ನಿಷೇದವಿಲ್ಲವೆಂದ ಸ್ಪೀಕರ್ !
ಹೀಗೆ ಲೋಕಸಭೆ ಮತ್ತು ರಾಜ್ಯ ಸಭೆ ಅಧಿವೇಶನದಲ್ಲಿ ಬಳಸಬಾರದ ಶಬ್ದಗಳ ಪಟ್ಟಿ ಹೊರಬೀಳುತ್ತಿದ್ದಂತೆ ವಿವಾದ ಎದ್ದ ಬೆನ್ನಲ್ಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯೆ ನೀಡಿ ʼಹೊಸದಾಗಿ ಯಾವುದೇ ಶಬ್ದಗಳನ್ನೂ ನಿಷೇಧ ಮಾಡಿಲ್ಲ. ಅಸಂಸದೀಯ ಶಬ್ದಗಳ ಬಿಡುಗಡೆ ಕ್ರಮ ಮೊದಲಿನಿಂದಲೂ ಇತ್ತು. ಆದರೆ ಪೇಪರ್ ವ್ಯರ್ಥವಾಗುವುದನ್ನು ತಪ್ಪಿಸಲು ಇದನ್ನು ಬಿಟ್ಟಿದ್ದೆವು. ಆದರೆ ಕಂಪ್ಯೂಟರ್‌ನಲ್ಲಿ, ಇಂಟರ್‌ನೆಟ್‌ನಲ್ಲಿ ಇದ್ದವು. ಇದೀಗ ಉಲ್ಲೇಖಿಸಲಾದ ಒಂದಷ್ಟು ಶಬ್ದಗಳು ಹಳೇ ದಾಖಲೆಯಲ್ಲಿ ಅಳಿಸಿಹೋಗಿದ್ದವನ್ನು ಮತ್ತೆ ಸಂಕಲನ ಮಾಡಿದ್ದೇವೆ. ಈ ಶಬ್ದಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದೇವೆ ಎಂದಲ್ಲ. ಆದರೆ ಅಸಂಸದೀಯ ಶಬ್ದಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದೇವೆ. ಈ ಮೂಲಕ ಬಳಸಬೇಡಿ ಎಂದು ಸಲಹೆಯನ್ನಷ್ಟೇ ಕೊಟ್ಟಿದ್ದೇವೆʼ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಗೇ, ಅಸಂಸದೀಯ ಶಬ್ದಗಳ ಪಟ್ಟಿಯನ್ನು ಮೊದಲು 1954ರಲ್ಲಿ ಬಿಡುಗಡೆ ಮಾಡಲಾಯಿತು. ಅದಾದ ಮೇಲೆ 1986, 1992, 1999, 2004, 2009, 2010 ಇಸ್ವಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹಾಗೇ, 2010ರಿಂದ ಪ್ರತಿವರ್ಷವೂ ಪಟ್ಟಿ ಬಿಡುಗಡೆಯಾಗುತ್ತಿದೆ ಎಂದೂ ಓಂಬಿರ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಇವು ಸ್ವತಂತ್ರ ಭಾರತದ ಸಿಂಹಗಳು; ರಾಷ್ಟ್ರ ಲಾಂಛನ ವಿವಾದಕ್ಕೆ ಪ್ರತಿಕ್ರಿಯಿಸಿದ ಅನುಪಮ್ ಖೇರ್