ಬೆಂಗಳೂರು: ಪ್ರಖ್ಯಾತ ಸಮಾಜ ಸುಧಾರಕ, ಚಿಂತಕ, ಬರಹಗಾರ ಮತ್ತು ಜಾತಿ ವಿರೋಧಿ ಹೋರಾಟಗಾರ ಮಹಾತ್ಮ ಜ್ಯೋತಿಬಾ ಫುಲೆ (Jyotiba Phule Jayanti) ಅವರ 196ನೇ ಜನ್ಮದಿನವಿಂದು. ಈ ದಿನದಂದು(ಏ.11) ಪೂರ್ತಿ ರಾಷ್ಟ್ರವೇ ಜ್ಯೋತಿಬಾ ಅವರನ್ನು ಸ್ಮರಣೆ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದ ಅವರ ಕುರಿತಾಗಿ ಕೆಲವು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಸ್ತಾರ TOP 10 NEWS: ಪಬ್ಲಿಕ್ ಪರೀಕ್ಷೆಗೆ ಗ್ರೀನ್ ಸಿಗ್ನಲ್‌ನಿಂದ, ಭಾರತಕ್ಕೆ ಬರಗಾಲದ ರೆಡ್ ಅಲರ್ಟ್‌ವರೆಗಿನ ಪ್ರಮುಖ ಸುದ್ದಿಗಳಿವು
ಜ್ಯೋತಿಬಾ ಫುಲೆ ಅವರು 1827ರ ಏಪ್ರಿಲ್ 11ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ವರ್ಣ ವ್ಯವಸ್ಥೆಯಲ್ಲಿ ಶೂದ್ರ ಎಂದು ವರ್ಗೀಕರಿಸಲ್ಪಟ್ಟಿರುವ ಮಾಲಿ ಜಾತಿಗೆ ಸೇರಿದ ಕುಟುಂಬದಲ್ಲಿ ಹುಟ್ಟಿದವರು ಅವರು. ಅವರ ಕುಟುಂಬವು ಕೃಷಿ ಮತ್ತು ತೋಟಗಾರಿಕೆಯಲ್ಲಿ ಕೆಲಸ ಮಾಡುತ್ತಿತ್ತು.
ಜ್ಯೋತಿಬಾ ಫುಲೆ ಅವರು ಶಿಕ್ಷಣದಲ್ಲಿ ಹಿಂದೆ ಬಿದ್ದವರು ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರ ಉನ್ನತಿ, ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಸೇರಿಕೊಂಡು ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಸುಮಾರು 173 ವರ್ಷಗಳ ಹಿಂದೆಯೇ ಪುಣೆಯಲ್ಲಿ ಮಹಿಳೆಯರಿಗೆ ಶಾಲೆಯೊಂದನ್ನು ತೆರೆದರು. ಇದು ಭಾರತದಲ್ಲಿನ ಮೊದಲ ಹೆಣ್ಣು ಮಕ್ಕಳ ಶಾಲೆಯಾಗಿ ಗುರುತಿಸಿಕೊಂಡಿತು.
ಜ್ಯೋತಿಬಾ ಫುಲೆಯವರು ತಮ್ಮ ಅನುಯಾಯಿಗಳೊಂದಿಗೆ ಕೆಳಜಾತಿಯ ಜನರಿಗಾಗಿ ಹೋರಾಡುವ ಉದ್ದೇಶದಿಂದ ‘ಸತ್ಯಶೋಧಕರ ಸಮಾಜ’ವನ್ನು ಸ್ಥಾಪಿಸಿದರು. ಹೆಣ್ಣು ಶಿಶು ಹತ್ಯೆಯಂತಹ ಸಮಸ್ಯೆಗಳ ವಿರುದ್ಧವೂ ಧ್ವನಿ ಎತ್ತಿದ್ದರು. ತುಳಿತಕ್ಕೊಳಗಾದವರ ಸಬಲೀಕರಣಕ್ಕಾಗಿ ವಿವಿಧ ಜಾತಿ ಮತ್ತು ಧರ್ಮದ ಜನರನ್ನು ಸಂಘಟನೆಯು ಸ್ವಾಗತಿಸಿತು. ಅವರು ಮಹಾರಾಷ್ಟ್ರದಲ್ಲಿ ಮತ್ತು ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಮಾಜ ಸುಧಾರಣಾ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ನಿಂತರು. ಹೀಗೆ ಸಮಾಜಕ್ಕಾಗಿಯೇ ದುಡಿದ ಅವರು 1890ರಲ್ಲಿ ಪುಣೆಯಲ್ಲಿ ನಿಧನರಾದರು.
ಇದನ್ನೂ ಓದಿ: Border Dispute: ʼಮಹಾʼ ಸರ್ಕಾರವನ್ನು ಕೇಂದ್ರ ವಜಾ ಮಾಡಬೇಕು ಎಂದ ಸಿದ್ದರಾಮಯ್ಯ
ಜ್ಯೋತಿಬಾ ಫುಲೆ ಅವರನ್ನು ಸ್ಮರಿಸಿದ ಗಣ್ಯರು
ಜ್ಯೋತಿಬಾ ಫುಲೆ ಅವರ ಜನ್ಮ ಜಯಂತಿಯಾದ ಇಂದು ಹಲವಾರು ಗಣ್ಯರು ಅವರನ್ನು ಸ್ಮರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, “ನಾನು ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಅವರಿಗೆ ನಮಸ್ಕರಿಸುತ್ತೇನೆ. ಅವರು ಸಾಮಾಜಿಕ ನ್ಯಾಯ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ನೀಡಿದ ಅತ್ಯುನ್ನತ ಕೊಡುಗೆಯನ್ನು ಸ್ಮರಿಸುತ್ತೇನೆ. ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡುತ್ತವೆ” ಎಂದು ಹೇಳಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವರು ಜ್ಯೋತಿಬಾ ಫುಲೆ ಅವರನ್ನು ಸ್ಮರಿಸಿದ್ದಾರೆ.